
ಮಂಗಳೂರು: ಅಕ್ಟೋಬರ್ ಇಪ್ಪತ್ತೊಂಭತ್ತರ ಅಂತಾರಾಷ್ಟ್ರೀಯ ಆಯುರ್ವೇದ ದಿನಾಚರಣೆಯಂದು ಮಂಗಳೂರಿನ ಮಂಜನಾಡಿಯಲ್ಲಿರುವ ವಿಷ್ಣುಮೂರ್ತಿ ದೇವಾಲಯದಲ್ಲಿ ಧನ್ವಂತರೀ ಪೂಜಾ ಮಹೋತ್ಸವದಲ್ಲಿ ವೈದ್ಯರೂ ಶಿಕ್ಷಕರೂ ಬರಹಗಾರರೂ ಆಗಿರುವ ಡಾ.ಸುರೇಶ ನೆಗಳಗುಳಿ ಇವರನ್ನು ಅಸೈಗೋಳಿಯ ಡಾ.ರಾಜಶೇಖರ ಅವರು ಶಾಲು ಫಲ ಕಾಣಿಕೆ ಸಹಿತವಾಗಿ ಗೌರವ ಸನ್ಮಾನ ಮಾಡಿದರು.




ಸುಮಾರು ಐದುನೂರು ಸಭಾ ಸದರನ್ನೊಳಗೊಂಡ ಈ ಸಮಾರಂಭದಲ್ಲಿ ವಿದ್ಯೆ ಕಲಿಸಿದ ಶಿಷ್ಯನ ಗುರುಭಕ್ತಿಗೆ ನೆಗಳಗುಳಿಯವರು ಭಾವುಕರಾಗಿ ಅವರ ಸುಕುಟುಂಬಕ್ಕೆ ಉತ್ತರೋತ್ತರ ಅಭಿವೃದ್ಧಿಯನ್ನು ಹಾರೈಸಿದರು.


ತಾವು ಉನ್ನತ ಮಟ್ಟಕ್ಕೆ ಏರಿದರೂ ವಿದ್ಯೆ ಕಲಿಸಿದ ಗುರುವಿನ ಮಹತ್ವವನ್ನು ಶಿಷ್ಯನಾದವನು ಅರಿತು ನಡೆಯುವುದು ಬಹಳ ಅಪರೂಪವಾಗಿರುವ ಈ ಕಾಲದಲ್ಲಿ ರಾಜಶೇಖರಂತಹ ಶಿಷ್ಯರ ಅಗತ್ಯವಿದೆ. ಗುರುವಿಗೆ ಮೀರಿದ ಶಿಷ್ಯನನ್ನು ಹೊಂದುವುದೂ ಒಂದು ಸುಯೋಗ ಎಂದರು.
ಡಾ.ಸುರೇಶ ನೆಗಳಗುಳಿಯವರು ಆಯುರ್ವೇದ ಹಾಗೂ ಅಲೋಪತಿ ಪದ್ಧತಿಗಳ ತಜ್ಞರೂ ,ಮೂಲವ್ಯಾದಿ, ಮೂತ್ರ ಕಲ್ಲು, ಪಿತ್ತಕೋಶ ಕಲ್ಲು ಹಾಗೂ ಚರ್ಮರೋಗಗಳ ವಿಶೇಷ ಪರಿಣತಿಯನ್ನು ಪಡೆದವರಾಗಿದ್ದಾರೆ.
ಕೊಪ್ಪ, ಮೂಡಬಿದಿರೆ,ಶೋರನೂರು ಮಣಿಪಾಲಗಳಲ್ಲಿ ಪ್ರಾಚಾರ್ಯ ,ಶಿಕ್ಷಕರಾಗಿ ಮೂವತ್ತೈದು ವರ್ಷಗಳ ಸೇವೆ ಸಲ್ಲಿಸಿ ಈಗ ಮಂಗಳಾ ಆಸ್ಪತ್ರೆ ಹಾಗೂ ಕಣಚೂರು ಆಯುರ್ವೇದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.