ಮಂಗಳೂರು: ಹುಡುಗಿಯ ಹೆಸರಿನಲ್ಲಿ ಇನ್ಸ್ಟಾಗ್ರಾಂ ಖಾತೆ ತೆರೆದು ಹಣ ಪಡೆದು ಬಳಿಕ ವಂಚಿಸಿರುವ ಬಗ್ಗೆ ನಗರದ ಸೆನ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.ಇನ್ಸ್ಟಾಗ್ರಾಂ ಖಾತೆಯ ಮೂಲಕ ಪರಿಚಯ ಮಾಡಿಕೊಂಡ ಅಪರಿಚಿತ ವ್ಯಕ್ತಿಯು ತನ್ನ ಹೆಸರು ನಿಹಾರಿಕಾ ಎಂದು ಪರಿಚಯಿಸಿಕೊಂಡಿದ್ದ. ಬೇಕರಿಯಲ್ಲಿ ತಾಯಿಯ ಬ್ಯಾಂಕ್ ಖಾತೆಯಿಂದ ಹಣ ಪಾವತಿಸಲು ಅಸಾಧ್ಯವಾಗಿರುವುರಿಂದ 3800 ರೂ. ವರ್ಗಾಯಿಸುವಂತೆ ಕ್ಯೂಆರ್ಕೋಡ್ ಕಳುಹಿಸಿದ್ದ ಎನ್ನಲಾಗಿದೆ. ಅದನ್ನು ನಂಬಿದ ಫಿರ್ಯಾದಿದಾರರು ಹಣ ಪಾವತಿಸಿದ್ದರು. ಆ ಬಳಿಕ ತಾನು ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದು 28000 ರೂ. ನೀಡುವಂತೆ ತಿಳಿಸಿದ. ಮತ್ತೆ ಆಸ್ಪತ್ರೆ ಖರ್ಚಿಗೆ ಹಣ ಬೇಕೆಂದು ಕೇಳಿ ಹಂತ ಹಂತವಾಗಿ 98700 ರೂ.ಗಳನ್ನು ವರ್ಗಾಯಿಸಿ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.