ಮಂಗಳೂರು: ಮಂಗಳೂರಿನ ಭಾರತ್ ಬಿಗ್ ಸಿನಿಮಾಸ್ ಚಿತ್ರ ಮಂದಿರದಲ್ಲಿ ಕೋಸ್ಟಲ್ ವುಡ್ ಕಲಾವಿದರ ಹಾಗೂ ತಂತ್ರಜ್ಞರ ಒಕ್ಕೂಟದ ( CATCA(R) )ಸದಸ್ಯರು ಕಳೆದ ವಾರ ಬಿಡುಗಡೆಗೊಂಡ ರೂಪೇಶ್ ಶೆಟ್ಟಿ ನಿರ್ದೇಶನದ “ಸರ್ಕಸ್” ತುಳು ಚಿತ್ರವನ್ನು ಒಟ್ಟಾಗಿ ವೀಕ್ಷಿಸಿದರು. ಈ ಒಕ್ಕೂಟವು ಸಮಾರು ಏಳು ವರ್ಷಗಳಿಂದ ಕಾರ್ಯಾಚರಿಸುವ ತುಳು ಚಿತ್ರರಂಗದ ಏಕೈಕ ಅಧಿಕೃತ ಸಂಘ. ಒಕ್ಕೂಟದಲ್ಲಿ ಚಿತ್ರರಂಗದ ಹಿರಿಯ,ಕಿರಿಯ ಕಲಾವಿದರು, ನಾಯಕ ನಟರು,ನಟಿಯರು, ನಿರ್ದೇಶಕರು, ನಿರ್ಮಾಪಕರು ಹೀಗೆ ಚಿತ್ರರಂಗದಲ್ಲಿರುವ ಅನುಭವಿ ತಂತ್ರಜ್ಞರು ಸದಸ್ಯರಾಗಿದ್ದಾರೆ. ಕಳೆದ ಏಳು ವರ್ಷಗಳಿಂದ ಕಲಾವಿದರು ಹಾಗೂ ತಂತ್ರಜ್ಞರಿಗೆ ಕೋಸ್ಟಲ್ ವುಡ್ ಪ್ರೀಮಿಯರ್ ಲೀಗ್ ಎನ್ನುವ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸುತ್ತಾ ಬಂದಿರುವ ಸಂಸ್ಥೆ ತುಳು ನಾಡಿನ ಜನಪದ ಆಟಗಳನ್ನು ಒಳಗೊಂಡ ಕೆಸರ್ ಡ್ ಒಂಜಿ ದಿನ, ತುಳು ಶತಚಿತ್ರೋತ್ಸವ , ಅಪ್ಪುವಿಗೆ ನಮನ, ರಕ್ತ ದಾನ, ನೇತ್ರದಾನ ಶಿಬಿರ , ಅಸೌಖ್ಯದಿಂದ ಬಳಲುತ್ತಿದ್ದ ಕಲಾವಿದರಿಗೆ ಧನ ಸಹಾಯ, ಕೋವಿಡ್ ಸಂಧರ್ಭದಲ್ಲಿ ಕಿಟ್ ವಿತರಣೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಈ ಒಕ್ಕೂಟವು ಇತ್ತೀಚಿಗೆ ಒಂದು ಒಳ್ಳೆಯ ಕಾರ್ಯವನ್ನು ಕೈಗೆತ್ತಿಕೊಂಡಿದೆ ಅದೇನೆಂದರೆ ಪ್ರಾದೇಶಿಕ ಭಾಷೆಯಾದ ತುಳು,ಕೊಂಕಣಿ ಹಾಗೂ ಮಂಗಳೂರಿನ ತಂಡ ರಚಿಸಿದ ಕನ್ನಡ ಸಿನೆಮಾಗಳಿಗೆ ಫ್ಲೆಕ್ಸ್ ಪೋಸ್ಟರ್ ಗಳ ಮೂಲಕ ಪ್ರಚಾರ ನೀಡುವ ಬದಲು ಒಕ್ಕೂಟದ ಎಲ್ಲಾ ಸದಸ್ಯರು ಚಿತ್ರವನ್ನು ಏಕ ಕಾಲಕ್ಕೆ ವೀಕ್ಷಣೆ ಮಾಡಿ ಚಿತ್ರ ತಂಡವನ್ನು ಪ್ರೋತ್ಸಾಹಿಸುವ ಕೆಲಸಕ್ಕೆ ಇಳಿದಿದೆ. ಇದರಲ್ಲಿ ಟಿಕೆಟ್ ನ ಅರ್ಧ ಮೊತ್ತ ಸದಸ್ಯರು ಭರಿಸಿ ಇನ್ನುಳಿದ ಮೊತ್ತವನ್ನು ಒಕ್ಕೂಟ ನೀಡುವುದು ಎಂದು ನಿರ್ಧರಿಸಿದೆ. ಈಗಾಗಲೇ ಬಿಡುಗಡೆಗೊಂಡಿದ್ದ ಕೊಂಕಣಿ ಚಿತ್ರ “ವೊಡ್ತಾಂತ್ಲೆ ಫುಲ್” ಚಿತ್ರವನ್ನು ಇದೇ ಮಾದರಿ ವೀಕ್ಷಿಸಿದ್ದು, ಒಕ್ಕೂಟದ ಸದಸ್ಯ ರೂಪೇಶ್ ಶೆಟ್ಟಿಯವರ ಚಿತ್ರವನ್ನು ಕೂಡ ವೀಕ್ಷಣೆ ಮಾಡಿದೆ.ನಮ್ಮ ತುಳು ಚಿತ್ರರಂಗದ ಮಾರುಕಟ್ಟೆ ಸೀಮಿತವಾಗಿರುವುದರಿಂದ ಎಲ್ಲರೂ ಒಗ್ಗಟ್ಟಿನಿಂದ ಒಬ್ಬರಿಗೆ ಒಬ್ಬರು ಸಹಾಯ ಮಾಡಿಕೊಂಡು ಬರುವ ಎಲ್ಲಾ ಚಿತ್ರಗಳನ್ನು ಗೆಲ್ಲಿಸಿಕೊಡಬೇಕು, ನಿರ್ಮಾಪಕರು ಹಾಗೂ ನಿರ್ದೇಶಕರು ಒಕ್ಕೂಟದ ಕಲಾವಿದರು ಹಾಗೂ ತಂತ್ರಜ್ಞರಿಗೆ ಚಿತ್ರಗಳಲ್ಲಿ ಅವಕಾಶ ನೀಡಬೇಕು ಎಂದು ಒಕ್ಕೂಟದ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಧರ್ಮನಗರ ತಿಳಿಸಿದರು.