ಮಂಗಳೂರು: ಹಾರ್ನ್ ಹಾಕಿದ ಕಾರು ಚಾಲಕನನ್ನು ಪ್ರಶ್ನಿಸಿದ್ದಕ್ಕೆ ತಂಡವೊಂದು ಹಲ್ಲೆಗೈದು ಜೀವ ಬೆದರಿಕೆ ಹಾಕಿದ ಘಟನೆ ನಗರದ ಅತ್ತಾವರ ಬಳಿ ನಡೆದಿದೆ.
ಝೀಶಾನ್ ಮೊಹಮ್ಮದ್ ಅಮೀನ್ ಮತ್ತು ಇಮಾಝಜ್ ಇಬ್ರಾಹಿಂ ಹಲ್ಲೆಗೊಳಗಾದವರು. ಸಲ್ಮಾನ್, ನೌಫಾಲ್, ಅಪ್ಪು, ರಶೀದ್ ಹಾಗೂ ಇತರರು ಪ್ರಕರಣದ ಆರೋಪಿಗಳು.
ಇಮಾಝ್ ಇಬ್ರಾಹಿಂ ಹಾಗೂ ಅವರ ಸಂಬಂಧಿ ಝೀಶಾನ್ ಬುಧವಾರ ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿರುವ ಸಂದರ್ಭ ಅತ್ತಾವರ ಕಾಸಾಗ್ರಾಂಡ್ ಬಳಿ ಹಿಂದಿನಿಂದ ಬರುತ್ತಿದ್ದ ಕಾರಿನ ಚಾಲಕ ಪದೇ ಪದೇ ಜೋರಾಗಿ ಹಾರ್ನ್ ಹಾಕುತ್ತಿದ್ದ. ಇದಕ್ಕೆ ಇಬ್ರಾಹಿಂ ಅವರು ಕಾರು ಚಾಲಕನಿಗೆ ಹಾರ್ನ್ ನಿಲ್ಲಿಸುವಂತೆ ಕೈ ಸನ್ನೆ ಮಾಡಿದ್ದು, ಕಾರು ಚಾಲಕ ಸಲ್ಮಾನ್ ಕಾರನ್ನು ಮುಂದೆ ಹೋಗಿ ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಅದಕ್ಕೆ ಸಲ್ಮಾನ್‌ನಲ್ಲಿ ಸರಿಯಾಗಿ ಮಾತನಾಡು ಎಂದು ಹೇಳಿದ್ದಕ್ಕೆ, ನಿನಗೆ ಬುದ್ದಿ ಕಲಿಸುತ್ತೇನೆ ಎಂದು ಅಲ್ಲಿಂದ ತೆರಳಿದ್ದಾನೆ. ಕೆಲ ಹೊತ್ತಿನ ಬಳಿಕ ಮರಳಿ ಬಂದು ನೌಫಾಲ., ಅಪ್ಪು, ರಶೀದ್ ಮತ್ತಿತರ ತಂಡ ಇಬ್ರಾಹಿಂ ಅವರಿಗೆ ಕೈಗಳಿಂದ ಹಾಗೂ ರಾಡ್‌ನಿಂದ ಹಲ್ಲೆ ನಡೆಸಿದೆ. ಈ ಸಂದರ್ಭ ತಡೆಯಲು ಬಂದ ಝೀಶಾನ್‌ಗೆ ಸಲ್ಮಾನ್ ಚೂರಿಯಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ.
ಘಟನೆಗೆ ಸಂಬಂಧಿಸಿ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.