ಮಂಗಳೂರು : ಚೇಳ್ಯಾರು ಗ್ರಾಮ ಪಂಚಾಯತ್ ತೀರಾ ಅಮಾನವೀಯವಾಗಿ ವರ್ತಿಸುತ್ತಿದೆ. ಬಿಲ್ ಪಾವತಿಸಲಿಲ್ಲ ಎಂದು ಆರ್ಥಿಕವಾಗಿ ತೀರಾ ದುರ್ಬಲವಾದ ಆರು ಕೊರಗ ಬುಡಕಟ್ಟು ಕುಟುಂಬಗಳ ಕುಡಿಯುವ ನೀರಿನ ಸಂಪರ್ಕವನ್ನು ಗ್ರಾಮ ಪಂಚಾಯತ್ ಗುರುವಾರ ಕಡಿತಗೊಳಿಸಿದೆ.



ಈ ಕುರಿತು ಜಿಲ್ಲಾಡಳಿತದ ಗಮನ ಸೆಳೆದಿದ್ದೆವು. ಈಗ ನೋಡಿದರೆ ಗ್ರಾಮ ಪಂಚಾಯತ್ ಸೇಡು ತೀರಿಸುವಂತೆ ನಿರ್ದಯವಾಗಿ ವರ್ತಿಸಿದೆ ಎಂದು ಆರೋಪಿಸಲಾಗುತ್ತಿದೆ.ಮನೆಗೆ ನೀರಿನ ಸಂಪರ್ಕ ಕಡಿತಗೊಂಡ ತರುವಾಯ ಕೊರಗ ಕುಟುಂಬಗಳು ಕಾಲೋನಿಯಲ್ಲಿದ್ದ ಗ್ರಾಮ ಪಂಚಾಯತ್ ನ ನೀರಿನ ಕೊಳವೆಯಿಂದ ನೀರು ತುಂಬಿಸಿ ಹೊತ್ತು ತರುತ್ತಿದ್ದರು.

ಇದನ್ನು ಗಮನಿಸಿದ ಪಂಚಾಯತ್ ಆಡಳಿತವು ಕೊರಗ ಕುಟುಂಬಗಳಿಗೆ ಹನಿ ನೀರು ಕೂಡಾ ಸಿಗಬಾರದು ಎಂದು ಪಂಚಾಯತ್ ಕೊಳವೆಯ ನೀರಿನ ಸಂಪರ್ಕವನ್ನೂ ಕಡಿತಗೊಳಿಸಿದೆ. ಈಗ ಆರು ಕುಟುಂಬಗಳಿಗೆ ಮನೆಯ ನಳ್ಳಿಯಲ್ಲೂ ನೀರಿಲ್ಲ, ಪಂಚಾಯತ್ ನ ಸಾರ್ವಜನಿಕ ಕೊಳವೆಯಿಂದಲೂ ನೀರಿಲ್ಲ. ದುಡ್ಡಿಲ್ಲದಿದ್ದರೆ ಕುಡಿಯಲು ಹನಿ ನೀರು ಪಡೆಯುವ ಹಕ್ಕೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.


ಅಳಿವಿನಂಚಿನ ಬುಡಕಟ್ಟು ಸಮುದಾಯದೊಂದಿಗಿನ ಈ ಅಮಾನವೀಯ ವರ್ತನೆ ಖಂಡನೀಯ. ಜಿಲ್ಲಾಡಳಿತದ ಈ ಕುರಿತಾದ ಮೌನ ಅಸಹನೀಯ. ತಕ್ಷಣವೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಸೂಕ್ತ ಕ್ರಮಗಳನ್ನು ಜರುಗಿಸಬೇಕು, ಇಲ್ಲದಿದ್ದಲ್ಲಿ ತೀವ್ರ ರೀತಿಯ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಸಿ.ಪಿ.ಐ.ಎಂ. ಹೇಳಿದೆ


