ತಿರುವನಂತಪುರಂ : ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುವ ವಿಡಿಯೋ ಮೂಲಕ ಖ್ಯಾತಿ ಗಳಿಸಿದ್ದ ಮೊನಾಲಿಸಾ ಭೋಂಸ್ಲೆ (18), ಬುಧವಾರ ಕೇರಳದ ಪೂವಾರ್‌ನಲ್ಲಿರುವ ಅರುಮನೂರ್ ದೇವಸ್ಥಾನದಲ್ಲಿ ನಟ ಫರ್ಮಾನ್ ಖಾನ್ ಅವರನ್ನು ಮದುವೆಯಾಗಿದ್ದಾರೆ. ಈ ಮೂಲಕ ತನ್ನ ವಿವಾಹದ ಬಗ್ಗೆ ಕೇಳಿಬಂದಿದ್ದ ‘ಲವ್ ಜಿಹಾದ್’ ಮತ್ತು ‘ಅಪ್ರಾಪ್ತ ವಯಸ್ಕಳು’ ಎಂಬ ಎಲ್ಲಾ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ.



ಹಿಂದೂ ಸಂಪ್ರದಾಯದಂತೆ ಮದುವೆ: ಕೇರಳದ ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ಈ ಸಮಾರಂಭದಲ್ಲಿ ಮೊನಾಲಿಸಾ ಕೆಂಪು ಸೀರೆಯಲ್ಲಿ ಮಿಂಚಿದರೆ, ವರ ಫರ್ಮಾನ್ ಬಿಳಿ ಧೋತಿ ಮತ್ತು ಶರ್ಟ್ ಧರಿಸಿದ್ದರು. “ನನಗೆ 18 ವರ್ಷ ತುಂಬಿದೆ. ನಾನು ಹಿಂದೂ ಆಚರಣೆಗಳ ಪ್ರಕಾರವೇ ವಿವಾಹವಾಗಿದ್ದೇನೆ. ಇದು ಲವ್ ಜಿಹಾದ್ ಅಲ್ಲ, ನಾನು ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತೇನೆ” ಎಂದು ಮೊನಾಲಿಸಾ ಸ್ಪಷ್ಟಪಡಿಸಿದ್ದಾರೆ. ದಂಪತಿಗಳು ಈಗಾಗಲೇ ತಮ್ಮ ವಿವಾಹವನ್ನು ಅಧಿಕೃತವಾಗಿ ನೋಂದಾಯಿಸಿಕೊಂಡಿದ್ದಾರೆ.

ಕುಟುಂಬದ ವಿರೋಧ ಮತ್ತು ಹೈಡ್ರಾಮಾ: ಮಗಳನ್ನು ಮರಳಿ ಮಧ್ಯಪ್ರದೇಶಕ್ಕೆ ಕರೆದೊಯ್ಯಲು ತಂದೆ ಜೈಸಿಂಗ್ ಭೋಂಸ್ಲೆ ಪ್ರಯತ್ನಿಸಿದಾಗ, ಜೋಡಿ ಥಂಪನೂರು ಪೊಲೀಸ್ ಠಾಣೆಯ ಮೆಟ್ಟಿಲೇರಿ ರಕ್ಷಣೆ ಕೋರಿದ್ದರು. “ನನ್ನ ಮಗಳ ಮೇಲೆ ಮಾಟಮಂತ್ರ ಮಾಡಿರಬಹುದು” ಎಂದು ಕುಟುಂಬಸ್ಥರು ಆರೋಪಿಸಿದರೂ, ಮೊನಾಲಿಸಾ ಮಾತ್ರ ತನ್ನ ನಿರ್ಧಾರ ಅಚಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಯುವತಿ ವಯಸ್ಕಳಾಗಿರುವುದರಿಂದ ತನ್ನ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕಿದೆ ಎಂದು ಪೊಲೀಸರು ಕುಟುಂಬಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.



