ಮಂಗಳೂರು: ಕಳೆದ ಮೂರು ವರ್ಷಗಳಿಂದ ಮಂಗಳೂರು ಸಹಿತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಷ್ಟು ಐ.ಟಿ/ಬಿ.ಟಿ ಕಂಪನಿಗಳು, ಸ್ಟಾರ್ಟ್ ಅಪ್ಗಳು ಆರಂಭಗೊಂಡಿವೆ ಎಷ್ಟು ಒಡಂಬಡಿಕೆ ಆಗಿವೆ? ಎಷ್ಟು ಬಂಡವಾಳ ಹೂಡಿಕೆ ಮಾಡಲಾಗಿದೆ? ಎಂದು ಶಾಸಕ ವೇದವ್ಯಾಸ ಕಾಮತ್ ರವರು ಬಜೆಟ್ ಅಧಿವೇಶನದಲ್ಲಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಯವರನ್ನು ಪ್ರಶ್ನಿಸಿದರು.


ಮುಂದುವರಿದು, ಈ ಮೂಲಕ ಜಿಲ್ಲಾವಾರು ಎಷ್ಟು ಜನರಿಗೆ ಉದ್ಯೋಗ ದೊರಕಿದೆ? ವಿಶೇಷವಾಗಿ ಈ ನಿಟ್ಟಿನಲ್ಲಿ ಕರಾವಳಿ ಭಾಗದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳೇನು? ಸಮಗ್ರ ಮಾಹಿತಿ ನೀಡಿ ಎಂದು ಪ್ರಶ್ನಿಸಿದರು.

ಇದೇ ವೇಳೆ ಈ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ ಯವರ ಹೇಳಿಕೆಯನ್ನು ಉಲ್ಲೇಖಿಸಿ, ಮಾನ್ಯ ಸಚಿವರು, ಹೊರಗೆ ಮಾತನಾಡುವಾಗ ಮಂಗಳೂರಿನಲ್ಲಿ ಏನೂ ಇಲ್ಲ ಎನ್ನುತ್ತಾರೆ. ಸದನದಲ್ಲಿ ಮಾತಾಡುವಾಗ ಮಂಗಳೂರಿನಲ್ಲಿ ಎಲ್ಲವೂ ಇದೆ ಎನ್ನುವುದು ದ್ವಂದ್ವ ನಿಲುವು ಸೃಷ್ಟಿಸುತ್ತದೆ ಎಂದರು.



