ಬೆಂಗಳೂರು : ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಒಂದರಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ 11.50 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಈ ಅಂತರಾಷ್ಟ್ರೀಯ ಡ್ರಗ್ಸ್ ಜಾಲದಲ್ಲಿ ಕೇರಳ ಮೂಲದ ಯುವಕ – ಯುವತಿಯನ್ನು ಬಂಧಿಸಲಾಗಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಅಶ್ವಿನ್(27) ಹಾಗೂ ಮುಬಿನಾ (25) ಅವರನ್ನು ಬಂಧಿಸಿದ್ದಾರೆ ,ಆರೋಪಿಗಳು ಕಳೆದ 1 ವರ್ಷದಿಂದ ಬಾಗಲೂರಿನ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನ ಫ್ಲಾಟ್ವೊಂದರಲ್ಲಿ ವಾಸಿಸುತ್ತಿದ್ದರು.ಬಂಧಿತರಿಂದ 8,335 ಎಲ್ಎಸ್ಡಿ ಸ್ಟ್ರೀಪ್ಸ್ ಗಳು, 5 ಕೆಜಿ ಹೈಡ್ರೋ ಗಾಂಜಾ, 534 ಗ್ರಾಂ ಚರಸ್, ಎರಡು ಮೊಬೈಲ್ ಹಾಗೂ ಒಂದು ದ್ವಿಚಕ್ರವಾಹನವನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.


ಡ್ರಗ್ ಪೆಡ್ಲಿಂಗ್ನ್ನೇ ತಮ್ಮ ಕಸುಬು ಮಾಡಿಕೊಂಡಿದ್ದ ಈ ಖತರ್ನಾಕ್ ಖದೀಮರು ಯಾರಿಗೂ ಅನುಮಾನ ಬರದಂತೆ ಪ್ರತಿಷ್ಠಿತ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದು ಅಕ್ರಮ ವ್ಯವಹಾರ ನಡೆಸುತ್ತಿದ್ದರು. ಇವರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರಬಹುದು ಎಂಬ ಶಂಕೆ ಮೇಲೆ ಇವರಿಬ್ಬರ ಮೇಲೆ ಪೊಲೀಸರು ವಿಶೇಷ ನಿಗಾ ಇಟ್ಟಿದ್ದರು.

ತನಿಖೆ ವೇಳೆ ಆರೋಪಿಗಳು ಥೈಲ್ಯಾಂಡ್ನಲ್ಲಿ ನೆಲೆಸಿರುವ ಕೇರಳ ಮೂಲದ ವಿನ್ಸೆಂಟ್ ಎಂಬಾತ ಕಳುಹಿಸಿಕೊಡುವ ಮಾದಕ ವಸ್ತುಗಳನ್ನು ಆತನ ನಿರ್ದೇಶನದಂತೆ ಗಿರಾಕಿಗಳಿಗೆ ತಲುಪಿಸಿ ಅಕ್ರಮ ಸಂಪಾದನೆ ಮಾಡುವ ವ್ಯವಸ್ಥಿತ ಕೃತ್ಯದಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


