ಉಡುಪಿ: ಬಾವಿಗೆ ಹಾರಿ ಆತ್ಮಹತ್ಯೆ ಮಾಡುವ ವೇಳೆ ವ್ಯಕ್ತಿಯೊಬ್ಬರ ರುಂಡ ಬೇರ್ಪಟ್ಟ ಹೃದಯವಿದ್ರಾವಕ ಘಟನೆ ಉಡುಪಿ ನಗರದ ಅಂಬಾಗಿಲು ವಾರ್ಡ್ನ ಕಕ್ಕುಂಜೆ ಪ್ರದೇಶದಲ್ಲಿ ಶನಿವಾರ ತಡರಾತ್ರಿ ನಡೆದಿದೆ.


ಮೃತರನ್ನು ಪುರುಷೋತ್ತಮ ನಾಯಕ್ (52) ಎಂದು ಗುರುತಿಸಲಾಗಿದೆ. ಮೃತ ಪುರುಷೋತ್ತಮ ನಾಯಕ್ ಅವರು ತಮ್ಮ ಮನೆಯ ಬಾವಿಯಲ್ಲಿ ನೈಲಾನ್ ಹಗ್ಗದ ಸಹಾಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ಅವರ ರುಂಡ ಬೇರ್ಪಟ್ಟಿದ್ದು ಬಾವಿಯ ನೀರು ಕೆಂಪು ಬಣ್ಣಕ್ಕೆ ತಿರುಗಿದೆ.

ಪುರುಷೋತ್ತಮ ನಾಯಕ್ ಅವರು ಮಣಿಪಾಲದ ಹೋಟೆಲ್ ಒಂದರಲ್ಲಿ ಸಹಾಯಕ ಮೇಲ್ವಿಚಾರಕ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಪುರುಷೋತ್ತಮ ನಾಯಕ್ ಅವರು ಹಲವು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದು, ಕಕ್ಕುಂಜೆಯ ಕಟ್ಟೆ ಮಹಾದೇವಿ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. ನಾಯಕ್ ಕುಟುಂಬವು ಸ್ಥಳೀಯವಾಗಿ ಉತ್ತಮ ಖ್ಯಾತಿ ಪಡೆದಿತ್ತು. ಆರ್ಥಿಕ ಸಮಸ್ಯೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

