ಬೆಂಗಳೂರು: ಕನ್ನಡ ಪ್ರಕಾಶಕಿ ಮತ್ತು ಸಾಹಿತಿ ಆಶಾ ರಘು (46) ಅವರು ಶನಿವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.


ಪೊಲೀಸ್ ಮೂಲಗಳ ಪ್ರಕಾರ, ಆಶಾ ಅವರು ಮನೆಯ ಕೋಣೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪತಿ ಮೃತರಾದ ಬಳಿಕ ಅವರು ಮಾನಸಿಕವಾಗಿ ನೊಂದಿದ್ದು, ಮನೆಯ ಕೊಠಡಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕುಟುಂಬದ ಸದಸ್ಯರು ಬಾಗಿಲು ಒಡೆದು ನೋಡಿದಾಗ, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಆಶಾ ಅವರಿಗೆ ಒಬ್ಬ ಪುತ್ರಿ ಇದ್ದಾರೆ. ಅವರ ಪತಿ ಕೆ.ಸಿ.ರಘು ಅವರು ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಪತಿಯ ಸಾವಿನ ನಂತರ ಆಶಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಮಲ್ಲೇಶ್ವರಂ ಪೊಲೀಸರು ತಿಳಿಸಿದ್ದಾರೆ. ಇನ್ನೂ ಇಂದು ಸಂಜೆಯೇ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ಹೇಳಿವೆ. ಆಶಾ ರಘು ಅವರ ಹಿನ್ನೆಲೆ: ಆಶಾ ರಘು ಅವರು ಕಾದಂಬರಿಕಾರ್ತಿಯಾಗಿ ಪ್ರಸಿದ್ಧರಾಗಿದ್ದರು. ದೂರದರ್ಶನ ಕ್ಷೇತ್ರದಲ್ಲೂ ಸಂಭಾಷಣೆಕಾರ್ತಿಯಾಗಿ ಮತ್ತು ಸಹಾಯಕ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದರು.



