ಉಡುಪಿ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.


ಕುಂದಾಪುರದ ಕಾವ್ರಾಡಿಯ ನೂರಾನಿ ಮಸೀದಿ ಎದುರಿನಲ್ಲಿ ನಿಲ್ಲಿಸಿದ್ದ ಮಾರುತಿ ಸ್ವಿಫ್ಟ್ ಕಾರು ದುಷ್ಕರ್ಮಿಗಳ ಬೆಂಕಿಗೆ ಆಹುತಿಯಾಗಿದೆ. ಕಾವ್ರಾಡಿ ಗ್ರಾಮದ ಶೇಖ್ ಮೊಹಮ್ಮದ್ ಗೌಸ್ ಕುಟುಂಬ ಅ.1ರಂದು ಹೈದರಾಬಾದ್ ಪ್ರವಾಸಕ್ಕೆ ಹೋಗಿದ್ದರು. ಪ್ರವಾಸಕ್ಕೆ ಹೋಗುವ 10 ದಿನಗಳ ಮೊದಲು 5 ಲಕ್ಷ ಮೌಲ್ಯದ ಸ್ವಿಫ್ಟ್ ಕಾರು ಖರೀದಿಸಿದ್ದರು. ಆದರೆ ಕಾರನ್ನು ಅವರ ಮನೆಗೆ ತೆಗೆದುಕೊಂಡು ಹೋಗಲು ಇತ್ತೀಚೆಗೆ ದಾರಿಯ ಸಮಸ್ಯೆ ಇದ್ದುದರಿಂದ ಕಾರನ್ನು ಕಾವ್ರಾಡಿಯ ನೂರಾನಿ ಮಸೀದಿಯ ಎದುರಿನ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದರು ಎನ್ನಲಾಗಿದೆ.
ಅ.4 ರಂದು ಬೆಳಿಗ್ಗೆ ಸುಮಾರು 5 ಗಂಟೆ ಸಮಯಕ್ಕೆ ಮೊಹಮ್ಮದ್ ಗೌಸ್ ಅವರ ಸಹೋದರ ಶೇಕ್ ಅನ್ಸಾರ್ ಸಾಹೇಬ್ ನಮಾಜಿಗೆ ಎದ್ದು ಬರುವಾಗ ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿರುವುದು ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಶೇಖ್ ಮೊಹಮ್ಮದ್ ಗೌಸ್ ಮನೆಯವರಿಗೆ ಆರ್ಥಿಕವಾಗಿ ನಷ್ಟ ಉಂಟು ಮಾಡುವ ಉದ್ದೇಶದಿಂದ ಕಾರಿಗೆ ಬೆಂಕಿ ಹಚ್ಚಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
