ಅಜೆಕಾರು ದನ ಕಳ್ಳತನ : ಮೂವರು ಆರೋಪಿಗಳು ಬಂಧನ, ತಲವಾರು ಹಾಗೂ ವಾಹನ ವಶ

Prakhara News
1 Min Read

ಕಾರ್ಕಳ : ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದನ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಕಾರ್ಕಳದ ಮೊಹಮ್ಮದ್ ಯೂನಿಸ್, ಮೂಡುಬಿದ್ರೆಯ ಮೊಹಮ್ಮದ್ ನಾಸೀರ್ ಹಾಗೂ ಮೊಹಮ್ಮದ್ ಇಕ್ಬಾಲ್ ಎಂದು ಗುರುತಿಸಲಾಗಿದೆ.

ಸೆ.28ರ ರಾತ್ರಿ ಶಿರ್ಲಾಲು ಗ್ರಾಮದ ಜಯಶ್ರೀ ಎಂಬವರ ಮನೆಗೆ ಮೂವರು ಅಪರಿಚಿತರು ತಲವಾರುಗಳೊಂದಿಗೆ ನುಗ್ಗಿ, ಬೆದರಿಕೆ ಹಾಕಿ, ಕೊಟ್ಟಿಗೆಯಲ್ಲಿದ್ದ ಸುಮಾರು 35 ಸಾವಿರ ರೂಪಾಯಿ ಮೌಲ್ಯದ ಮೂರು ಹಸುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಡಾ. ಹರ್ಷಾ ಪ್ರಿಯಂವದಾ ಅವರ ಮಾರ್ಗದರ್ಶನದಲ್ಲಿ, ಪಿ.ಎಸ್.ಐ ಮಹೇಶ್ ಟಿ.ಎಂ ಅವರ ನೇತೃತ್ವದ ತನಿಖಾ ತಂಡವು ಸೂಕ್ಷ್ಮ ತನಿಖೆ ನಡೆಸಿ, ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.

ಆರೋಪಿಗಳಿಂದ ಎರಡು ತಲವಾರುಗಳು, ಮಾರುತಿ ಸ್ವಿಫ್ಟ್ ಕಾರು, ಮಹೀಂದ್ರಾ ಬೋಲೆರೋ ವಾಹನ ಹಾಗೂ ಐದು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 5 ಲಕ್ಷ 87 ಸಾವಿರ ರೂಪಾಯಿ ಆಗಿರುತ್ತದೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಅಜೆಕಾರು ಪೊಲೀಸ್ ಠಾಣೆಯ ಸಿಬ್ಬಂದಿ ಸತೀಶ್ ಬೆಳ್ಳೆ, ಪ್ರದೀಪ್ ಶೆಟ್ಟಿ, ಮೂರ್ತಿ ಹೆಬ್ರಿ, ಸುಜೀತ್ ಕುಮಾರ್ ಹಾಗೂ ಕಾರ್ಕಳ ಗ್ರಾಮಾಂತರ ಠಾಣೆಯ ಸಿಬ್ಬಂದಿ ಭಾಗಿಯಾಗಿದ್ದರು.

Share This Article
Leave a Comment