ಧರ್ಮಸ್ಥಳ: ವಿಶೇಷ ತನಿಖಾ ತಂಡದ ಶೋಧದ ವೇಳೆಅಕ್ರಮವಾಗಿ ಎರಡು ತಲವಾರು ಮತ್ತು ಒಂದು ಬಂದೂಕು ಪತ್ತೆ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿಗೆ ಬೆಳ್ತಂಗಡಿ ಠಾಣೆಗೆ ವಿಚಾರಣೆಗಾಗಿ ಹಾಜರಾಗುವಂತೆ ಪೊಲೀಸರು ಮೂರನೇ ನೋಟಿಸ್ ಜಾರಿ ಮಾಡಿದ್ದಾರೆ.ಎರಡು ನೋಟಿಸ್ ಜಾರಿ ಮಾಡಿದ್ದರೂ ಈವರೆಗೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಮತ್ತೆ ಸೆಪ್ಟೆಂಬರ್ 26ರಂದು ತಿಮರೋಡಿ ಮನೆಗೆ ಬೆಳ್ತಂಗಡಿ ಪೊಲೀಸರು ಮೂರನೇ ನೋಟಿಸ್ ಜಾರಿ ಮಾಡಿದ್ದು, ಸೆಪ್ಟೆಂಬರ್ 29ಕ್ಕೆ ವಿಚಾರಣೆಗೆ ಹಾಜರಾಗುಂತೆ ನೋಟಿಸ್‌ನ್ನು ತಿಮರೋಡಿ ಅವರ ಮನೆಯ ಗೋಡೆಗೆ ಅಂಟಿಸಿದ್ದಾರೆ.ಮಹೇಶ್ ಶೆಟ್ಟಿ ತಿಮರೋಡಿ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಜಾಮೀನಿಗಾಗಿ ಮಂಗಳೂರಿನ ಸೆಶನ್ಸ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಸೆಪ್ಟೆಂಬರ್ 27ರಂದು ನಡೆಯಲಿದೆ. ಇಲ್ಲಿ ಅವರಿಗೆ ನಿರೀಕ್ಷಣಾ ಜಾಮೀನಿಗೆ ಸಂಬಂಧಿಸಿದಂತೆ ತೀರ್ಪು ಬರುವವರೆಗೆ ಅವರು ಠಾಣೆಗೆ ಹಾಜರಾಗುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ.


ಮಹೇಶ್ ಶೆಟ್ಟಿ ತಿಮರೋಡಿ ಪ್ರಕರಣ ದಾಖಲಾದ ಬಳಿಕ ಕಳೆದ ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದಾರೆ. ಈ ನಡುವೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಪುತ್ತೂರು ಸಹಾಯಕ ಕಮಿಷನರ್ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದು, ಮಹೇಶ್ ಶೆಟ್ಟಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಗಡಿಪಾರು ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಹೋಗುವ ಅವಕಾಶವಿದ್ದು, ಈ ಬಗ್ಗೆಯೂ ಪ್ರಯತ್ನಗಳು ನಡೆಯುತ್ತಿದೆ.
