ಮಂಗಳೂರು: ಬಟ್ಟೆ ಅಂಗಡಿ, ಕಲ್ಯಾಣ ಮಂಟಪದಲ್ಲಿ ಚಿನ್ನದ ಸರ ಕಳ್ಳತನ; ಮಹಿಳೆ ಬಂಧನ

Prakhara News
1 Min Read

ಮಂಗಳೂರು: ಬಟ್ಟೆ ಅಂಗಡಿ ಹಾಗೂ ಕಲ್ಯಾಣ ಮಂಟಪದಲ್ಲಿ ನಡೆದ ಚಿನ್ನದ ಸರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಮೂಲದ ಮಹಿಳೆ ಮಿನ್ನತ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತಳಿಂದ ಒಟ್ಟು 1.80 ಲಕ್ಷ ರೂ. ಮೌಲ್ಯದ 18 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜೂನ್ 2 ರಂದು ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮದ ರಹಮತ್ ತಮ್ಮ ಮಕ್ಕಳೊಂದಿಗೆ ತೊಕ್ಕೊಟ್ಟಿನಲ್ಲಿರುವ ಸಾಗರ್ ಕಲೆಕ್ಷನ್ ಬಟ್ಟೆ ಅಂಗಡಿಗೆ ಹೋಗಿದ್ದರು. ಮಳೆಯ ಕಾರಣ ಅವರು ಸ್ಟ್ರೀಟ್ ಪ್ಯಾಲೇಸ್ ಬೇಕರಿ ಬಳಿ ನಿಂತಿದ್ದರು. ಆ ಸಂದರ್ಭದಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬರು ಅವರ ಮಗಳ ಕುತ್ತಿಗೆಯಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಲಭಿಸಿದ ಮಾಹಿತಿ ಮೇರೆಗೆ, ಪೊಲೀಸರು ಸೆಪ್ಟೆಂಬರ್ 12 ರಂದು ಮಿನ್ನತ್ ಅವರನ್ನು ಬಂಧಿಸಿ ಕದ್ದ ಸರವನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿ, ಜುಲೈ 9 ರಂದು ಕೆಎಂಎಸ್ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಬ್ಯಾಗ್‌ನಿಂದ 8 ಗ್ರಾಂ ಚಿನ್ನದ ಸರವನ್ನು ಕದ್ದಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಈ ಸರವನ್ನೂ ಸಹ ವಶಪಡಿಸಿಕೊಂಡಿದ್ದಾರೆ.ಮಿನ್ನತ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.ಆರೋಪಿಯಿಂದ ಒಟ್ಟು 18 ಗ್ರಾಂ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

Share This Article
Leave a Comment