ಭಾರತೀಯ ಸೇನೆಗೆ ಸೇರ ಬಯಸೋರಿಗೆ ಗುಡ್ ನ್ಯೂಸ್: ಉಚಿತ ಮಾರ್ಗದರ್ಶನ, ತರಬೇತಿಗೆ ಅರ್ಜಿ ಆಹ್ವಾನ

Prakhara News
1 Min Read

 ಭಾರತೀಯ ಸೇನೆ/ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2025-26 ನೇ ಸಾಲಿನ 2 ನೇ ತಂಡಕ್ಕಾಗಿ (ಬಾಲಕರಿಗೆ ಮಾತ್ರ) ಆಯ್ಕೆ ಪೂರ್ವ ಸಿದ್ದತೆ ಬಗ್ಗೆ ಉಚಿತ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಭ್ಯರ್ಥಿಗಳು ನಿಗದಿತ ನಮೂನೆ ಅರ್ಜಿಯನ್ನು ಆಯಾ ಜಿಲ್ಲೆಯ ಜಿಲ್ಲಾ/ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಅರ್ಜಿಯನ್ನು ಖುದ್ದಾಗಿ ಅಥವಾ ನೊಂದಾಯಿತ ಅಂಚೆಯ ಮೂಲಕ ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಉತ್ತರ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ನೆಲಮಹಡಿ ಕೊಠಡಿ ಸಂಖ್ಯೆ-1, ಕಾರವಾರ 581301 ಇಲ್ಲಿಗೆ ಅ.03 ರೊಳಗಾಗಿ ಸಲ್ಲಿಸುವುದು.

ಅರ್ಜಿ ಸಲ್ಲಿಸಲು ಅಭ್ಯರ್ಥಿ ಮತ್ತು ಕುಟುಂಬದ ಒಟ್ಟು ಗರಿಷ್ಟ ವಾರ್ಷಿಕ ಆದಾಯ ಮಿತಿ ಪ್ರವರ್ಗ-1ಕ್ಕೆ ರೂ.2.50 ಲಕ್ಷ ಹಾಗೂ ಪ್ರವರ್ಗ-2(ಎ), 3(ಎ) ಮತ್ತು 3(ಬಿ) ಗಳಿಗೆ ರೂ. 1 ಲಕ್ಷ ಒಳಗೊಂಡಿರಬೇಕು. ಅಭ್ಯರ್ಥಿಯು 10 ನೇ ತರಗತಿಯನ್ನು ಉತೀರ್ಣವಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಟ 33 ಅಂಕಗಳು ಮತ್ತು ಸರಾಸರಿ ಶೇ.45 ರಷ್ಟು ಅಂಕಗಳನ್ನು ಪಡೆದಿರಬೇಕು. ಗ್ರೇಡಿಂಗ್ ಸಿಸ್ಟಂ ಇದ್ದಲ್ಲಿ ಮೇಲ್ಕಂಡಂತೆ ಸಮಾನವಾದ ಗ್ರೇಡ್ ಪಡೆದಿರಬೇಕು.

ಜನ್ಮ ದಿನಾಂಕ ಮತ್ತು ವಯಸ್ಸು 3/10/2025ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಯು 3/10/2005 ರಿಂದ 3/10/2008 ರ ನಡುವಿನ ಅವಧಿಯಲ್ಲಿ ಜನಿಸಿರಬೇಕು. ಅಭ್ಯರ್ಥಿಗಳಿಗೆ ತರಬೇತಿಯನ್ನು ಕಾರವಾರ ವೀರ ಬಹದ್ದೂರ್ ಹೆಂಜಾ ನಾಯ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯಲ್ಲಿ ನೀಡಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

Share This Article
Leave a Comment