Home ಕರಾವಳಿ ಜನೌಷಧಿ ಕೇಂದ್ರಗಳು ಪ್ರಧಾನ ಮಂತ್ರಿ ಮೋದಿಯವರ ಕಾರಣದಿಂದ ಬಡವರ ಪಾಲಿನ ಸಂಜೀವಿನಿಯಾಗಿದೆ: ಸಂಸದ ಕ್ಯಾ. ಬ್ರಿಜೇಶ್...

ಜನೌಷಧಿ ಕೇಂದ್ರಗಳು ಪ್ರಧಾನ ಮಂತ್ರಿ ಮೋದಿಯವರ ಕಾರಣದಿಂದ ಬಡವರ ಪಾಲಿನ ಸಂಜೀವಿನಿಯಾಗಿದೆ: ಸಂಸದ ಕ್ಯಾ. ಬ್ರಿಜೇಶ್ ಚೌಟ

0

ಮಂಗಳೂರು: ಜನೌಷಧಿ ಕೇಂದ್ರಗಳಲ್ಲಿ ಔಷಧಿಗಳು ಕೈಗೆಟಕುವ ದರದಲ್ಲಿ ದೊರೆಯುತ್ತಿದ್ದು, ಬಡವರು ಸೇರಿದಂತೆ ಜನಸಾಮಾನ್ಯರ ಪಾಲಿಗೆ ಇದು ಸಂಜೀವಿನಿಯಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.

ನಗರದ ಕಂಕನಾಡಿ ಬೈಪಾಸ್ ಬಳಿಯಿರುವ ’ಜನೌಷಧಿ ಕೇಂದ್ರ’ದಲ್ಲಿ ಇಂದು ನಡೆದ ‘ಜನ್ ಔಷಧಿ ದಿವಸ್’ ಕಾರ್‍ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಡ ಮತ್ತು ಮಧ್ಯಮ ವರ್ಗಗಳಿಗೆ ಆರೋಗ್ಯ ವೆಚ್ಚ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತಿರುವುದನ್ನು ಮನಗಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (PMBJP)ವನ್ನು ಜಾರಿಗೊಳಿಸಿ, ’ಜನೌಷಧಿ ಕೇಂದ್ರಗಳ ಮೂಲಕ ಗುಣಮಟ್ಟದ ಜೆನೆರಿಕ್ ಔಷಧವು ಕಡಿಮೆ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಿದ್ದಾರೆ. ಈಗಾಗಲೇ ದೇಶದಲ್ಲಿ 1500ಕ್ಕೂ ಹೆಚ್ಚು ಜನೌಷಧಿ ಮೆಡಿಕಲ್ ಶಾಪ್ ಗಳು ಕಾರ್ಯನಿರ್ವಹಿಸುತ್ತಿದ್ದು, 2027ರ ವೇಳೆಗೆ 25,000 ಜನೌಷಧಿ ಕೇಂದ್ರಗಳ ಸ್ಥಾಪಿಸುವ ಸಂಕಲ್ಪವನ್ನು ನಮ್ಮ ಕೇಂದ್ರ ಸರ್ಕಾರ ಹೊಂದಿದೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 128 ಕೇಂದ್ರಗಳಿದ್ದು ಮುಂದಿನ ಎರಡು ವರ್ಷದಲ್ಲಿ ಅವುಗಳ ಸಂಖ್ಯೆಯನ್ನು 150ಕ್ಕೆ ಏರಿಸುವ ಗುರಿಯಿದೆ ಎಂದು ತಿಳಿಸಿದ್ದಾರೆ.

ಜನೌಷಧಿ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಔಷಧಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರಕುತ್ತಿರುವುದರಿಂದ ಬಡವರಿಗೆ ಚಿಕಿತ್ಸೆಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಜೆನೆರಿಕ್‌ ಔಷಧಗಳು ದೇಶದಲ್ಲಿ ಕೋಟ್ಯಂತರ ಭಾರತೀಯರ ಆರೋಗ್ಯ ವೆಚ್ಚವನ್ನು ಕಡಿಮೆ ಮಾಡುತ್ತಿದೆ. ವೈದ್ಯರು ಕೂಡಾ ಜನೌಷಧಿಯನ್ನೇ ಶಿಫಾರಸು ಮಾಡಿ ಔಷಧ ಚೀಟಿ ಬರೆದು ಕೊಡುವ ಮೂಲಕ ಜನೌಷಧಿ ಯೋಜನೆಯ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು. ಜನರು ಕೂಡಾ ಕಡಿಮೆ ವೆಚ್ಚದಲ್ಲಿ ಔಷಧಗಳನ್ನು ಪೂರೈಸುವ ಜನೌಷಧಿ ಕೇಂದ್ರಗಳನ್ನು ಜನಪ್ರಿಯಗೊಳಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ , ಜನೌಷಧಿ ಕೇಂದ್ರದ ಮಾಲಕರಾದ ರವೀಶ್, ನ್ಯೂರಾಲಜಿಸ್ಟ್ ಡಾ. ರಾಘವೇಂದ್ರ, ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here