
ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಕೋಲ್ನಾಡು ಕಿರುಸೇತುವೆ ಬಳಿ ಹೆದ್ದಾರಿ ಸೂಚನಾ ಫಲಕಕ್ಕೆ ಓಮ್ನಿ ಡಿಕ್ಕಿಯಾಗಿ ಪಲ್ಟಿಯಾಗಿದ್ದು ಓಮ್ನಿಯಲ್ಲಿದ್ದ ಬಂಟ್ವಾಳ ಸಜಿಪ ಮೂಲದ ನಾಲ್ವರು ಪವಾಡ ಸದೃಶವಾಗಿ ಪಾರಾಗಿದ್ದಾರೆ.



ಉಡುಪಿ ಜಿಲ್ಲೆಯ ಕಟಪಾಡಿಯಿಂದ ಕಂಬಳ ಮುಗಿಸಿ ವಾಪಸಾಗುತ್ತಿದ್ದ ವೇಳೆ ಮುಲ್ಕಿ ಸಮೀಪದ ಕೋಲ್ನಾಡು ಕಿರುಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಓಮ್ನಿ, ಹೆದ್ದಾರಿಯ ಕಬ್ಬಿಣದ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದಿಂದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಈ ಸಂದರ್ಭ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು ,ಕೂಡಲೇ ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಓಮ್ನಿಯನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ.