ಮಣಿಪಾಲ: ಐ.ಟಿ. ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂದು ನಂಬಿಸಿ ಮನೆ ಯಜಮಾನಿಯ 7.50 ಲಕ್ಷ ರೂ. ನಗದು ಹಾಗೂ 3 ಲಕ್ಷ ಬೆಲೆಬಾಳುವ ಡೈಮಂಡ್ ಸರವನ್ನು ಕೆಲಸದಾಕೆ ತೆಗೆದುಕೊಂಡು ಹೋಗಿ ಮೋಸ ಮಾಡಿರುವ ಘಟನೆ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶಿವಳ್ಳಿ ಗ್ರಾಮದ ನಿವಾಸಿ ಪೆರಂಪಳ್ಳಿ ರಸ್ತೆಯ ಜ್ಯೂಲಿಯಟ್ ಅವರು 4 ತಿಂಗಳಿನಿಂದ ಪೆರಂಪಳ್ಳಿಯ ಸುನೀತಾ ಅವರನ್ನು ಮನೆ ಕೆಲಸಕ್ಕೆ ಸೇರಿಸಿಕೊಂಡಿದ್ದರು. ಕೆಲಸದಾಕೆ ಸುನಿತಾ ಬಳಿ ಮನೆಯ ಯಜಮಾನಿ ತನ್ನ ಮತ್ತು ಗಂಡನ ನಡುವೆ ಇದ್ದ ಮನಸ್ತಾಪದ ಬಗ್ಗೆ ಹೇಳಿಕೊಂಡಿದ್ದರು. ಅದಕ್ಕೆ ಸುನೀತಾ ಗಂಡನಿಗೆ ವಿಚ್ಛೇದನ ನೀಡುವಂತೆ ಜೂಲಿಯೆಟ್ ಅವರಿಗೆ ಸಲಹೆ ನೀಡಿದ್ದರು. ಬೇಸರಗೊಂಡ ಜ್ಯೂಲಿಯೆಟ್ ಮನೆ ಬಿಟ್ಟು ಹೋಗಲು ತೀರ್ಮಾನಿಸಿದ್ದರು. ತಾಯಿಯನ್ನು ಮನೆಗೆ ಬರಲು ಹೇಳಿ ಅ. 10ರಂದು ತಾಯಿಗೆ ಬಟ್ಟೆಬರೆ ಹಾಗೂ ಸ್ವಲ್ಪ ಚಿನ್ನ ಹಾಗೂ ಗಂಡನ ಮನೆಯ ಲಾಕರ್‌ನಲ್ಲಿಟ್ಟಿದ್ದ 10 ಲಕ್ಷ ರೂಪಾಯಿಯಲ್ಲಿ 1 ಲಕ್ಷ ರೂ. ಹಣವನ್ನು ನೀಡಿದ್ದರು.
ಅ. 29ರಂದು ಬೆಳಗ್ಗೆ ಜ್ಯೂಲಿಯೆಟ್ ಮನೆಯಲ್ಲಿ ಇದ್ದ ವೇಳೆಯೇ ಸುನೀತಾ ಅವರು ಸ್ಟ್ಯಾನಿ ಅವರೊಂದಿಗೆ ಮನೆಗೆ ಬಂದು ಐ.ಟಿ. ಅಧಿಕಾರಿಗಳು ಬಂದಿದ್ದಾರೆ. ನಿಮ್ಮ ಮನೆಗೆ ರೈಡ್ ಮಾಡುತ್ತಾರೆ. ಲಾಕರ್‌ನಲ್ಲಿ ಇದ್ದ ಹಣ ಹಾಗೂ ಒಡವೆಯನ್ನು ತೆಗೆಯಬೇಕು ಎಂದು ಹೇಳಿ ಲಾಕರ್ ಕೀ ತೆಗೆದುಕೊಂಡು ಲಾಕರ್ ಓಪನ್ ಮಾಡಿ ಅದರಲ್ಲಿ ಇದ್ದ ಹಣದಲ್ಲಿ 1.50 ಲಕ್ಷ ರೂ.ಗಳನ್ನು ಜ್ಯೂಲಿಯೆಟ್ ಅವರ ಬ್ಯಾಗ್ ಗೆ ಹಾಕಿ ಉಳಿದ 7.50 ಲಕ್ಷ ರೂ. ಹಾಗೂ 3 ಲಕ್ಷ ಬೆಲೆಬಾಳುವ ಡೈಮಂಡ್ ನೆಕ್ಲೆಸ್ ಅವಳ ಚೀಲದಲ್ಲಿ ಹಾಕಿಕೊಂಡು ನನ್ನಲ್ಲಿ ಇರಲಿ ಆನಂತರ ಕೊಡುತ್ತೇನೆ ಎಂದು ಹೇಳಿದ್ದರು. ಐ.ಟಿ.ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂದು ನಂಬಿಸಿ ಸುನೀತಾ ಹಾಗೂ ಸ್ಟಾನಿ 7.50 ಲಕ್ಷ ರೂ. ನಗದು ಹಾಗೂ 3 ಲಕ್ಷ ಬೆಲೆಬಾಳುವ ಡೈಮಂಡ್ ಸರವನ್ನು ತೆಗೆದುಕೊಂಡು ಹೋಗಿ ವಂಚಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.