ಮೀನುಗಳು ಅನೇಕ ಜನರ ನೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಮೀನು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ, ಮೀನು ತಿನ್ನುವಾಗ ಬಹಳ ಎಚ್ಚರಿಕೆಯಿಂದ ತಿನ್ನಬೇಕು. ಇಲ್ಲವಾದಲ್ಲಿ ಮೀನಿನ ಮುಳ್ಳುಗಂಟಲಲ್ಲಿ ಸಿಲುಕಿಕೊಳ್ಳುತ್ತದೆ. ಇದರಿಂದ ತೊಂದರೆ ಅನುಭವಿಸಿದ ಸಾಕಷ್ಟು ಮಂದಿ ಇದಾರೆ. ಮೀನು ತಿನ್ನುವ ಪ್ರತಿಯೊಬ್ಬರು ಜೀವನದಲ್ಲಿ ಒಮ್ಮೆಯಾದರೂ ಈ ಪರಿಸ್ಥಿತಿಯನ್ನು ಎದುರಿಸಿರುತ್ತಾರೆ. ಸಿಕ್ಕಿಕೊಂಡ ಮುಳ್ಳನ್ನು ಬಿಡಿಸಲು ನೀರು ಕುಡಿಯುವುದು ಹಾಗೂ ಅನ್ನ ನುಂಗುವುದು ಸೇರಿದಂತೆ ಕೆಲವು ಸಲಹೆಗಳು ಈಗಾಗಲೇ ನಮಗೆ ತಿಳಿದಿವೆ. ಆದರೆ, ಕೆಲವೊಮ್ಮೆ ಈ ವಿಧಾನಗಳು ಕೆಲಸ ಮಾಡುವುದಿಲ್ಲ. ಹೀಗಾಗಿ ಗಂಟಲಲ್ಲಿ ಸಿಲುಕಿಕೊಂಡಿರುವ ಮೀನಿನ ಮುಳ್ಳನ್ನು ಹೋಗಲಾಡಿಸಲು ಇದಕ್ಕಿಂತಲೂ ಕೆಲ ಸುಲಭ ಮಾರ್ಗಗಳಿವೆ.
ಅಂದಹಾಗೆ ಹಲವು ಪರಿಹಾರಗಳು ನಮ್ಮ ಅಡುಗೆಮನೆಯಲ್ಲಿಯೇ ಇವೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಅಂತಹ ಪರಿಹಾರಗಳಲ್ಲಿ ನಿಂಬೆ ರಸವು ಒಂದು. ನಿಂಬೆ ರಸವು ಗಂಟಲಿನಲ್ಲಿ ಸಿಲುಕಿರುವ ಮೀನಿನ ಮುಳ್ಳನ್ನು ಸುಲಭವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ. ಒಂದು ಚಮಚ ನಿಂಬೆ ರಸವನ್ನು ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಸೇವಿಸಿದರೆ ಮೀನಿನ ಮುಳ್ಳು ಸುಲಭವಾಗಿ ಬಿಡಿಸಿಕೊಳ್ಳುತ್ತದೆ. ನಿಂಬೆರಸ ಮತ್ತು ಆಲಿವ್ ಎಣ್ಣೆಯೊಂದಿಗೆ ಸೇವಿಸಿದಾಗ, ಗಂಟಲಿಗೆ ಸಿಲುಕಿರುವ ಮೀನಿನ ಕಡ್ಡಿ ತುಂಬಾ ಮೃದುವಾಗುತ್ತದೆ ಮತ್ತು ಗಂಟಲಿನಿಂದ ಕೆಳಗೆ ಬರುತ್ತದೆ. ಮೀನಿನ ಮುಳ್ಳು ಗಂಟಲಿನಲ್ಲಿ ಸಿಲುಕಿಕೊಂಡಾಗ ಒಮ್ಮೆ ಕೈಯಿಂದ ತೆಗೆಯಲು ಪ್ರಯತ್ನಿಸಿ, ಅದು ಕೆಲಸ ಮಾಡದಿದ್ದರೆ, ಮತ್ತೆ ಮತ್ತೆ ಪ್ರಯತ್ನಿಸಬೇಡಿ. ಇದರಿಂದ ತೊಂದರೆಯಾಗುವ ಸಾಧ್ಯತೆ ಇದೆ.