ಮಂಗಳೂರು: ಸಿಎಂ ಪತ್ನಿ ಸೈಟ್ ವಾಪಸ್ ಕೊಟ್ಟು, ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ತಪ್ಪಾಗಿದೆ ಕ್ಷಮಿಸಿ ಎಂಬ ವರ್ತನೆ ತೋರುತ್ತಿದ್ದಾರೆ. ಆದರೆ, ಅವರು ಈ ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿ ಮಾನ ಮರ್ಯಾದೆಯನ್ನಾದರೂ ಉಳಿಸಿಕೊಳ್ಳಲಿ ಎಂದು ದ.ಕ.ಜಿಲ್ಲಾ ಸಂಸದ ಬ್ರಿಜೇಶ್ ಚೌಟ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಕಾನೂನು, ಸಂವಿಧಾನಕ್ಕೆ ಗೌರವ ನೀಡದೆ ಕುರ್ಚಿಗೆ ಅಂಟಿಕೊಂಡು ಕುಳಿತುಕೊಂಡಿದ್ದಾರೆ. ಅವರು ತಮ್ಮ 40 ವರ್ಷದ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಆದರೆ, ಈಗ ಅವರ ಬಟ್ಟೆಯೆಲ್ಲ ಕಪ್ಪಾಗಿ ಬಿಳಿ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಬಂದಿದೆ ಎಂದರು. ಬಾಂಗ್ಲಾ ಮಾದರಿ ದಾಳಿಯ ಎಚ್ಚರಿಕೆ ನೀಡಿದ್ದ ಕಾಂಗ್ರೆಸ್ ಎಂಎಲ್‌ಸಿ ಐವಾನ್ ಡಿಸೋಜ ವಿರುದ್ಧ ಎಫ್ಐಆರ್ ದಾಖಲಾಗದ ವಿಚಾರದಲ್ಲಿ ನಾವು ಐವಾನ್ ಡಿಸೋಜರ ಮೇಲೆ ಎಫ್ಐಆರ್ ದಾಖಲಿಸಲು ನಾವು ಪೊಲೀಸ್ ಠಾಣೆ ಮುಂಭಾಗ ಅಂಗಲಾಚುವ ಪರಿಸ್ಥಿತಿಯಿತ್ತು. ಆದರೂ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಹಾಗಾದರೆ ಸಿಎಂ ವಿರುದ್ಧ ಪಾರದರ್ಶಕವಾಗಿ ತನಿಖೆ ನಡೆಯುತ್ತದೆಯೇ ಎಂಬ ಅನುಮಾನ ಮೂಡುತ್ತಿದೆ. ಇದೇ ಕಾರಣಕ್ಕೆ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು. ಐವಾನ್ ಡಿಸೋಜ ವಿರುದ್ಧ ನಮ್ಮ ಕಾನೂನಾತ್ಮಕ ಹೋರಾಟ ಮುಂದುವರೆಯುತ್ತದೆ ಎಂದು ಬ್ರಿಜೇಶ್ ಚೌಟ ಹೇಳಿದರು.