Itagi Temple is one of the greatest monuments of the country with its unique carvings. Historian Dr. said that it is a tribute to the artistic heritage of the district. Sharanbasappa
ಗಂಗಾವತಿ:ಇಟಗಿಯ ಮಹಾದೇವ ದೇವಾಲಯ ಕೊಪ್ಪಳ ಜಿಲ್ಲೆಯ ಕಲಾ ಕಿರೀಟ . ಇಟಗಿ ದೇವಾಲಯ ತನ್ನ ಅಪೂರ್ವ ಕೆತ್ತನೆಯಿಂದ ನಾಡಿನ ಶ್ರೇಷ್ಠ ಸ್ಮಾರಕಗಳಲ್ಲಿ ಒಂದಾಗಿದೆ. ಅದು ಜಿಲ್ಲೆ ಕಲಾಪರಂಪರೆಗೆ ಕೀರ್ತಿಮುಕುಟವಾಗಿದೆ ಎಂದು ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಅವರು ಅಭಿಪ್ರಾಯ ಪಟ್ಟರು.ಅವರು ಗಂಗಾವತಿ ಹಾಗೂ ಕೊಪ್ಪಳ ಚಾರಣ ಬಳಗಗಳ ಸಂಯುಕ್ತ ಆಶ್ರಯದಲ್ಲಿ ಇಂದು ದಿನಾಂಕ 4-6-2023 ರಂದು ಹಮ್ಮಿಕೊಂಡಿದ್ದ 26ನೇ ಚಾರಣದಲ್ಲಿ ಮಾಹಿತಿ ನೀಡುತ್ತಾ ಮಾತನಾಡಿದರು. ಅವರು ಇಟಗಿ ಗ್ರಾಮದಲ್ಲಿ ಕೊಪ್ಪಳ ಜಿಲ್ಲೆಯಲ್ಲಿಯೇ ಚಾರಿತ್ರಿಕ ಕಾಲದ ಅತೀ ಪುರಾತನವಾದ ಸಂಕೋಲೆ ಭರಮಪ್ಪನ ಹೆಸರಿನ ದ್ವಾರ ತೋರಣವಿದೆ.ಅದರ ಮೇಲೆ ಬಾದಾಮಿ ಚಾಲುಕ್ಯ ದೊರೆ ಯುದ್ದಮಲ್ಲ ಸತ್ಯಾಶ್ರಯ ವಿನಯಾದಿತ್ಯನ ಕಾಲದ ಶಾಸನವಿದ್ದು ಜಿಲ್ಲೆಯ ಏಕೈಕ ಬಾದಾಮಿ ಚಾಲುಕ್ಯರ ಸ್ರಾರಕವಾಗಿದೆ. ತದನಂತರ ಇಟಗಿ ಗ್ರಾಮ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಒಂದು ಅಗ್ರಹಾರವಾಗಿತ್ತು, ಅಲ್ಲಿ 400 ಜನ ಮಹಾನ್ ಪಂಡಿತರು ವಾಸವಾಗಿದ್ದರು.ಇಂಥ ಸ್ಥಳದಲ್ಲಿ ಚಾಲುಕ್ಯ ಸಾಮ್ರಾಟ ಆರನೇ ವಿಕ್ರಮಾದಿತ್ಯನ(681-696) ದಂಡನಾಯಕ ಮಹಾದೇವನು ಕ್ರಿ.ಶ. 1112 ರಲ್ಲಿ ಮಹಾದೇವ ದೇವಾಲಯವನ್ನು ,ತನ್ನ ತಂದೆಯ ಹೆಸರಿನಲ್ಲಿ ನಾರಾಯಣ ದೇವಾಲಯವನ್ನು, ತಾಯಿಯ ಹೆಸರಿನಲ್ಲಿ ಚಂದಲೇಶ್ವರ ದೇವಾಲಯವನ್ನು ಹಾಗೂ ಸಾಹಸ ಭೈರವ, ಸರಸ್ವತಿ ಮಠ ಮುಂತಾದ ದೇವಾಲಯಗಳನ್ನು, ದೇವಾಲಯಗಳ ಹಿಂದೆ ದೊಡ್ಡ ಪುಷ್ಕರಣಿಯನ್ನು, ಮುಂದೆ ವಿಶಾಲವಾದ ಹೊಂಡವನ್ನು ನಿರ್ಮಿಸಿದನು. ಇಲ್ಲಿಯ ಸರಸ್ವತಿ ಮಠದಲ್ಲಿರುವ ಶಾಸನದಲ್ಲಿ ಆತನನ್ನು ಮಹಾಪ್ರಧಾನ, ಕನ್ನಡ ಸಂಧಿವಿಗ್ರಹಿ, ಮನೆವೆರ್ಗಡೆ, ದಂಡನಾಯಕ ಎಂದು ಕರೆಯಲಾಗಿದೆ.ಮಹಾದೇವ ದೇವಾಲಯ ವೇಸರ ಶೈಲಿಯಲ್ಲಿ ನಿರ್ಮಾಣವಾಗಿದ್ದು. ಅದ್ಭುತವಾದ , ಆಕರ್ಷಕವಾದ ಕಲಾಕೃತಿಯಾಗಿದೆ. ಅದನ್ನು ಅಲ್ಲಿಯ ಶಾಸನದಲ್ಲಿ ದೇವಾಲಯ ಚಕ್ರವರ್ತಿ ಎಂದು ವರ್ಣಿಸಲಾಗಿದೆ. ಶಿವರಾಮ ಕಾರಂತರು , ಫರ್ಷಿ ಬ್ರೌನ್ ಎಂಬ ಆಂಗ್ಲ ವಿಮರ್ಶಕ ಈ ದೇವಾಲಯದ ವಾಸ್ತುಶಿಲ್ಪ ಸೌಂದರ್ಯವನ್ನು ಕೊಂಡಾಡಿದ್ದಾರೆ. ಕನ್ನಡ ನಾಡಿನ ಅಪೂರ್ವ ಕೆತ್ತನೆಯ ದೇವಾಲಯಗಳಲ್ಲಿ ಇದು ಒಂದಾಗಿದೆ. ಈ ದೇವಾಲಯದ ಮಹಾಸ್ತಂಭ ಮಂಟಪದ ಭುವನೇಶ್ವರಿಯಲ್ಲಿ ಮಹಾದೇವ ದಂಡನಾಯಕನು ಸಹಿರ ಆತನ ತಾತ, ತಂದೆ,ತಾಯಿ, ಹೆಂಡತಿ ಮತ್ತು ಮಕ್ಕಳು ಈ ಪರಿವಾರದ ಶಿಲ್ಪಗಳು ಇದ್ದು ಶಿಲ್ಪಗಳ ಕೆಳಗೆ ಅವರವರ ಹೆಸರುಗಳಿವೆ.ಈ ದೇವಾಲಯದ ಸೌಂದರ್ಯಕ್ಕೆ ಮಾರುಹೋದ ಆರನೇ ವಿಕ್ರಮಾದಿತ್ಯನು ಪೂಜಾಕಾರ್ಯಗಳಿಗಾಗಿ ಕುಕನೂರ ಬಳಿಯ ಬೆಣ್ಣೆಕಲ್ಲು ಗ್ರಾಮವನ್ನು ದಾನವಾಗಿ ನೀಡಿದನು. ಸ್ವತಃ ಮಹಾದೇವನು ಪೂಜೆ ಪುನಷ್ಕಾರಕ್ಕಾಗಿ 500ಮತ್ತರು ಹೊಲವನ್ನು ದಾನವಾಗಿ ನೀಡಿದನು ಎಂದು ದೇವಾಲಯದ ಸಮಗ್ರ ಇತಿಹಾಸ ತಿಳಿಸಿಕೊಟ್ಟರು. ಹಿರಿಯ ಸಾಹಿತಿಗಳಾದ ಮಹಾಂತೇಶ ಮಲ್ಲನಗೌಡರು ಸರಕಾರ ಇಟಗಿ ಉತ್ಸವ ನಡೆಸಬೇಕು ಎಂದು ಆಗ್ರಹಿಸಿದರು. ಕೊಪ್ಪಳ ಚಾರಣ ಬಳಗದ ಸಂಚಾಲಕ ಡಾ. ಸಿದ್ದಲಿಂಗಪ್ಪ ಕೊಟ್ನೇಕಲ್ ಅವರು ಇಟಗಿ ಒಂದು ಜೈನ ಕೇಂದ್ರವಾಗಿತ್ತೂ ಕೂಡಾ ಎಂದರು. ಗಂಗಾವತಿ ಚಾರಣ ಬಳಗದ ಅಧ್ಯಕ್ಷರಾದ ಡಾ. ಶಿವಕುಮಾರ ಮಾಲೀಪಾಟೀಲ್ ರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಗಂಗಾವತಿ ಸಿ.ಬಿ.ಎಸ್. ಬ್ಯಾಂಕ್ ನ ವ್ಯವಸ್ಥಾಪಕರು ,ಇಟಗಿ ಗ್ರಾಮದವರಾದ ಸಿ.ಜಿ. ಜವಳಿಯವರು ಎಲ್ಲಾ ಚಾರಣಿಗರಿಗೆ ಉಪಹಾರದ ವ್ಯವಸ್ಥೆ ಮಾಡಿದ್ದರು. ಆನೇಗೊಂದಿಯ ಸುದರ್ಶನವರ್ಮ, ಟಿ. ಆಂಜನೇಯ, ಮೈಲಾರಪ್ಪ ಬೂದಿಹಾಳ, ಡಾ. ಸುಂಕದ, ಹರನಾಯಕ, ಜಗದೀಶ ಮಾಲೀಪಾಟೀಲ್, ಜಂಬಗಿ ಶಿಕ್ಷಕರು, ಪ್ರಲ್ಹಾದ್ ಕುಲಕರ್ಣಿ, ಪತ್ರಕರ್ತ ಮಲ್ಲಿಕಾರ್ಜುನ ನಾಯಕ ಮುಂತಾದವರು ಸಹಿತ ಸುಮಾರು 35 ಚಾರಣಿಗರು ಭಾಗವಹಿಸಿದ್ದರು.