Home ಕರಾವಳಿ PMEGP ಮತ್ತು ಮುದ್ರಾ ಯೋಜನೆಯಡಿ ಹೆಚ್ಚಿನ ಫಲಾನುಭವಿಗಳನ್ನು ತಲುಪಲು ಸಂಸದ ಚೌಟ ಸೂಚನೆ

PMEGP ಮತ್ತು ಮುದ್ರಾ ಯೋಜನೆಯಡಿ ಹೆಚ್ಚಿನ ಫಲಾನುಭವಿಗಳನ್ನು ತಲುಪಲು ಸಂಸದ ಚೌಟ ಸೂಚನೆ

0

ದಕ್ಷಿಣ ಕನ್ನಡದಲ್ಲಿ ಕೇಂದ್ರ ಸರ್ಕಾರದ PMEGP ಮತ್ತು ಮುದ್ರಾ ಯೋಜನೆಯಡಿ ಗ್ರಾಮೀಣ ಭಾಗದವರಿಗೆ ವಿಶೇಷವಾಗಿ
ಮಹಿಳೆಯರು, ಪರಿಶಿಷ್ಟರು, ಹಿಂದುಳಿದ ವರ್ಗದ ಹೆಚ್ಚಿನ ಫಲಾನುಭವಿಗಳನ್ನು ತಲುಪಲು ಬ್ಯಾಂಕ್‌ ಗಳು ಉತ್ತೇಜನ ನೀಡಬೇಕೆಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಕರೆ ನೀಡಿದ್ದಾರೆ.
ಮಂಗಳೂರು ನಗರದಲ್ಲಿರುವ ದ.ಕ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ದ.ಕ ಜಿಲ್ಲಾ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಯಾ.ಚೌಟ ಅವರು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ದೊರೆಯುವ ಸಾಲ-ಸೌಲಭ್ಯಗಳ ಬಗ್ಗೆ ಅರ್ಹ ಫಲಾನುಭವಿಗಳಿಗೆ ಸೂಕ್ತ ಮಾಹಿತಿ ನೀಡಿ ಅದರ ಅನುಕೂಲ ದೊರಕಿಸಿ ಕೊಡುವುದಕ್ಕೆ ಜಿಲ್ಲೆಯಲ್ಲಿರುವ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.

ಅಲ್ಲದೆ, ಪಿಎಂಇಜಿಪಿ ಯೋಜನೆಗೆ ಫಲಾನುಭವಿಗಳ ಆಯ್ಕೆ ಹಾಗೂ ಆಯ್ಕೆಗೊಂಡ ಫಲಾನುಭವಿಗಳ ಸಹಾಯಧನ ವಿಚಾರವಾಗಿಯೂ ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಂಸದರು ವಿಸ್ತೃತವಾಗಿ ಚರ್ಚಿಸಿದರು.

ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರೈತರಿಗೆ ಕೆಸಿಸಿ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಒದಗಿಸುವುದಕ್ಕೆ ಬ್ಯಾಂಕ್ಗಳು ಆದ್ಯತೆ ನೀಡಬೇಕು. ಜತೆಗೆ ಉನ್ನತ ವಿದ್ಯಾಭ್ಯಾಸಕ್ಕೆ ಸಾಲ ನೀಡುವಲ್ಲಿ ಕೂಡ ಬ್ಯಾಂಕ್ಗಳು ಯಾವುದೇ ವಿಳಂಬ ಮಾಡದೆ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಸಾಲ ಮಂಜೂರು ಮಾಡಬೇಕೆಂದು ಬ್ಯಾಂಕ್ ಅಧಿಕಾರಿಗಳಿಗೆ ಕ್ಯಾ.ಚೌಟ ಅವರು ಸೂಚಿಸಿದರು.

ಪಿಎಂ-ಸ್ವನಿಧಿ ಯೋಜನೆಡಿ ಬೀದಿಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದಿಂದ ಸಾಲ-ಸೌಲಭ್ಯ ಒದಗಿಸಲಾಗುತ್ತಿದೆ. ಈ ಯೋಜನೆ ಬಗ್ಗೆ ಬೀದಿಬದಿ ವ್ಯಾಪಾರಿಗಳಿಗೆ ಹೆಚ್ಚಿನ ಅರಿವು ಮೂಡಿಸುವ ಜತೆಗೆ ಅವರಿಗೆ ಸಾಲ ಸೌಲಭ್ಯವನ್ನು ಒದಗಿಸುವುದಕ್ಕೆ ಅಗತ್ಯ ಕ್ರಮ ವಹಿಸಬೇಕೆಂದು ಕ್ಯಾ.ಚೌಟ ಅವರು ತಿಳಿಸಿದರು.

ಸಂಸದರಾಗಿ ಆಯ್ಕೆಗೊಂಡ ಬಳಿಕ ಪಾಲ್ಗೊಂಡಿದ್ದ ಇಂದಿನ ಈ ಮೊದಲ ಲೀಡ್ ಬ್ಯಾಂಕ್ ಸಭೆಯಲ್ಲಿ ಕ್ಯಾ.ಚೌಟ ಅವರು ಜಿಲ್ಲೆಯ ಬ್ಯಾಂಕಿಂಗ್ ವಲಯದಲ್ಲಿರುವ ವಿವಿಧ ಯೋಜನೆಗಳು, ಗ್ರಾಹಕರ ಸಮಸ್ಯೆಗಳು ಸಮಸ್ಯೆಗಳು ಹಾಗೂ ಸಾಲ- ಸೌಲಭ್ಯಗಳ ವಿತರಣೆಯಲ್ಲಿ ಬ್ಯಾಂಕ್ ಗಳ  ಪ್ರಗತಿ ಬಗ್ಗೆಯೂ ಬ್ಯಾಂಕ್ ಅಧಿಕಾರಿಗಳ ಜತೆಗೆ ಸಮಗ್ರವಾಗಿ ಪರಾಮರ್ಶೆ ನಡೆಸಿದರು.

LEAVE A REPLY

Please enter your comment!
Please enter your name here