ಮಂಗಳೂರು: ವಿಚ್ಛೇದಿತೆಯನ್ನು ಮದುವೆಯಾಗುವುದಾಗಿ ನಂಬಿಸಿ ವ್ಯವಹಾರದ ನೆಪದಲ್ಲಿ 64 ಲಕ್ಷ ರೂಪಾಯಿ ಪಡೆದು ಹಿಂದಿರುಗಿಸದೆ ವಂಚನೆಗೈದಿರುವ ಬಗ್ಗೆ ತಮಿಳುನಾಡು ಮೂಲದ ವ್ಯಕ್ತಿಯ ವಿರುದ್ಧ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚನೆಗೈದ ವ್ಯಕ್ತಿಯ ಮೇಲೆ ದೂರು ನೀಡಿರುವ ಮಹಿಳೆ ‘ತನಗೆ ತನ್ನ ಅಣ್ಣಂದಿರು ಮರು ಮದುವೆ ಮಾಡಲು ತಯಾರಿ ನಡೆಸುತ್ತಿದ್ದರು. ಆದ್ದರಿಂದ ತಾನು ತನ್ನ ಪ್ರೊಫೈಲ್ ಅನ್ನು ಮ್ಯಾಟ್ರಿಮೋನಿಯಲ್ ಆ್ಯಪ್‌ನಲ್ಲಿ ಅಪ್ಲೋಡ್ ಮಾಡಿದ್ದೆ. ಈ ವೇಳೆ ತಮಿಳುನಾಡು ಪಳ್ಳಪಟ್ಟಿ ಮೂಲದ ಮುಹಮ್ಮದ್ ಫರೀದ್ ಶೇಖ್ ಎಂಬಾತ ಸಂಪರ್ಕಕ್ಕೆ ಬಂದು ಮದುವೆಯಾಗುವುದಾಗಿ ತಿಳಿಸಿದ್ದಾನೆ. ಆದ್ದರಿಂದ ತಾನು ತನ್ನ ಅಣ್ಣಂದಿರೊಂದಿಗೆ ಮಾತುಕತೆ ನಡೆಸಲು ಸೂಚಿಸಿದ್ದೆ. ಅದೇ ರೀತಿ ಮುಹಮ್ಮದ್ ಫರೀದ್ ಶೇಖ್ ಎಂಬಾತನು ತನ್ನ ಸಹೋದರರು ಎಂಬುವುದಾಗಿ ಸಾದಿಕ್ ಮತ್ತು ಮುಬಾರಕ್ ಎಂಬವರನ್ನು ಪರಿಚಯಿಸಿಕೊಂಡು ಕಂಕನಾಡಿಯಲ್ಲಿರುವ ರೆಸ್ಟೋರೆಂಟ್‌ಗೆ ಬಂದಿದ್ದಾನೆ. ಈ ವೇಳೆ ಆತ ಈ ಹಿಂದೆ ಮದುವೆಯಾಗಿರುದನ್ನು ಮುಚ್ಚಿದ್ದಾನೆ. ಎರಡು ದಿನದ ಬಳಿಕ ಆತ ತನಗೆ ವಾಟ್ಸ್ ಆ್ಯಪ್ ಮೂಲಕ ಮೆಸೇಜ್ ಮಾಡಲು ಆರಂಭಿಸಿದ್ದಾನೆ. ಬಳಿಕ ನಾನಾ ಹಂತಗಳಲ್ಲಿ 64 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ಸಂತ್ರಸ್ತ ಮಹಿಳೆ ಮಂಗಳೂರು ಸೆನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.