ಮಂಗಳೂರು: ನಗರದ ಸ್ವಾಯತ್ತ ಶಿಕ್ಷಣ ಸಂಸ್ಥೆಯಾಜುಲೈದ ಸಂತ ಆಗ್ನೆಸ್ 11ನೇ ಘಟಿಕೋತ್ಸವದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿಟ್ಟೆ ಡೀಮ್ಡ್ ವಿಶ್ವ ವಿದ್ಯಾಲಯದ ಉಪಕುಲಪತಿ ಪ್ರೊ. ಡಾ. ಎಮ್. ಎನ್.ಮೂಡಿತ್ತಾಯ ಅವರು – ‘ಪದವಿ ಶಿಕ್ಷಣ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದ ಸಂತ ಆಗ್ನೆಸ್ ಸ್ವಾಯತ್ತ ಶಿಕ್ಷಣ ಸಂಸ್ಥೆಯನ್ನು ಆಭಿನಂದಿಸುತ್ತಾ ಭಾಷಣ ಆರಂಭಿಸಿ, ಇಂದು ಪ್ರಪಂಚದ ಎಲ್ಲರ ಕಣ್ಣುಗಳು ಭಾರತೀಯ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಾಧನೆಯ ಮೇಲೆ ನಿಂತಿದೆ. ಪ್ರಪಂಚದ ಶಿಕ್ಷಣ ಕ್ಷೇತ್ರಗಳಲ್ಲಿ, ಉದ್ಯೋಗ ಕ್ಷೇತ್ರಗಳಲ್ಲಿ ಗಣನೀಯ ಬದಲಾವಣೆಗಳಾಗಿವೆ. ವೈಯಕ್ತಿಕ ಮತ್ತು ಔದ್ಯೋಗಿಕ ಬದುಕಿನ ನಾನಾ ಸವಾಲುಗಳು ಇಂದು ವಿದ್ಯಾರ್ಥಿಗಳ ಎದುರಿಗಿವೆ. ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಇರಲಿ. ಬದುಕಿನಲ್ಲಿ ಹೊಸತನ, ಪ್ರಗತಿ, ಸಾಧನೆ, ಮಾನವೀಯತೆ ಇರಲಿ. ನಿಮ್ಮ ಬದುಕಿನ ಪರಿಸರದ ಬಗ್ಗೆ, ನಿಮ್ಮ ಶಕ್ತಿಯ ಬಗ್ಗೆ ಅರಿವಿರಲಿ. ಹಿರಿಯರ ಬಗ್ಗೆ ಕಾಳಜಿ, ಪ್ರೀತಿ ಇರಲಿ’ ಎಂದು ಪದವಿ ಪಡೆದುಕೊಳ್ಳುವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಅಪೋಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಪ್ರೊವಿನ್ಶಿಯಲ್ ಸುಪೀರಿಯರ್ ಸಿಸ್ಟರ್ ಮರಿಯಾ ಶಮಿತ ಎ.ಸಿ. ಮಾತನಾಡಿ ಆಗ್ನೆಸ್ ಕಾಲೇಜು ಶತಮಾನದಿಂದಲೂ ಬೋಧನೆಯ ಗುಣಮಟ್ಟವನ್ನು ಕಾಯ್ದಿರಿಸಿಕೊಂಡಿರುವ ಸಂಸ್ಥೆ. ಜೊತೆಗೆ ಪಠ್ಯೇತರ ಚಟುವಟಿಕೆಗಳು, ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೂ ವಿಶೇಷ ಆದ್ಯತೆಯನ್ನು ನೀಡುತ್ತಿದೆ. ಹಾಗಾಗಿ ನೂತನ ಪದವೀಧರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಬರುತ್ತಿದೆ. ಈಗಾಗಲೇ ಕಾಲೇಜು ಕೋ-ಎಜುಕೇಶನ್ ಗೆ ತೆರೆದುಕೊಂಡಿರುವುದು ಅಭಿನಂದನೀಯ ಎಂದರು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವದ ಜತೆಗೆ ಮಾನವೀಯ ಕಾಳಜಿಯುಳ್ಳವರಾಗಿರಿ – ಎಂದು ಕರೆಯಿತ್ತರು.
ಪ್ರಾಂಶುಪಾಲೆ ಸಿಸ್ಟರ್ ಡಾ. ವೆನಿಸ್ಸಾ ಎ. ಸಿ, ನೂತನ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ರಿಜಿಸ್ಟ್ರಾರ್ ಡಾ. ನ್ಯಾನ್ಸಿ ಹೆಚ್ ವಾಝ್, ಸಂತ ಆಗ್ನೆಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸಿಸ್ಟರ್ ಸುದೀಪ, ಉಪ ಕಾರ್ಯದರ್ಶಿ ಸಿಸ್ಟರ್ ಡಾ. ಮರಿಯ ರೂಪ ಎ.ಸಿ., ಕಾರ್ಯಕ್ರಮ ಸಂಯೋಜಕಿ ಕಾಲೇಜಿನ ಡೀನ್ ಶುಭರೇಖಾ ಉಪಸ್ಥಿತರಿದ್ದರು.
ವ್ಯಾಸಂಗ ಪೂರ್ತಿಗೊಳಿಸಿದ 520 ವಿದ್ಯಾರ್ಥಿಗಳು ಉಪಕುಲಪತಿಗಳಿಂದ ಪದವಿ ಸ್ವೀಕರಿಸಿದರು. ಉನ್ನತ ರಾಂಕ್ ಗಳಿಸಿದ 17 ವಿದ್ಯಾರ್ಥಿಗಳನ್ನು ವಿಶೇಷವಾಗಿ ಅಭಿನಂದಿಸಲಾಯಿತು.
ಆಡಳಿತ ಮಂಡಳಿ ಸದಸ್ಯರು, ಅಕಾಡೆಮಿಕ್ ಕೌನ್ಸಿಲ್ ಮತ್ತು ಗವರ್ನಿಂಗ್ ಸಮಿತಿಯ ಸದಸ್ಯರು, ವಿವಿಧ ವಿಭಾಗಗಳ ಡೀನ್ ಗಳು, ಮುಖ್ಯಸ್ಥರು, ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಸಿಸ್ಟರ್ ಡಾ. ವಿನೋರಾ ಎ. ಸಿ. ಸ್ವಾಗತಿಸಿ, ಸ್ನಾತಕೋತ್ತರ ಮನಶಾಸ್ತ್ರ ವಿಭಾಗದ ಡಾ.ಪ್ರೇಮಾನಂದ್ .ವಿ. ವಂದಿಸಿದರು. ಸ್ನಾತಕೋತ್ತರ ಎಂ. ಬಿ. ಎ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ಶರಲ್ ಪ್ರೀತಿಕಾ ನಿರೂಪಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಯಜುಶಾ ಮತ್ತು ಬಳಗ ನಾಡಗೀತೆಯನ್ನು ಹಾಡಿದರು. ಸಿಸ್ಟರ್ ರಿಬಾನಿಕಾ ಮತ್ತು ಬಳಗ ಕಾಲೇಜಿನ ಪ್ರಾರ್ಥನಾ ಗೀತೆಯನ್ನು ಹಾಡಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.