Home ಕರಾವಳಿ ಬೆಳ್ತಂಗಡಿ: ಬಿಜೆಪಿ ಮುಖಂಡ ಶಶಿರಾಜ್ ಶೆಟ್ಟಿ ಅರೆಸ್ಟ್- ಪೊಲೀಸ್ ಠಾಣೆಯಲ್ಲಿ ಧರಣಿ ಕುಳಿತ ಶಾಸಕ ಹರೀಶ್...

ಬೆಳ್ತಂಗಡಿ: ಬಿಜೆಪಿ ಮುಖಂಡ ಶಶಿರಾಜ್ ಶೆಟ್ಟಿ ಅರೆಸ್ಟ್- ಪೊಲೀಸ್ ಠಾಣೆಯಲ್ಲಿ ಧರಣಿ ಕುಳಿತ ಶಾಸಕ ಹರೀಶ್ ಪೂಂಜಾ

0

ಬೆಳ್ತಂಗಡಿ: ಅಕ್ರಮವಾಗಿ ಕಲ್ಲುಕೋರೆ ಗಣಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಬಿಜೆಪಿ ಯುವಮೋರ್ಚಾ ಮುಖಂಡ ಶಶಿರಾಜ್ ಶೆಟ್ಟಿಯನ್ನು ಅರೆಸ್ಟ್ ಮಾಡಿದ್ದರು. ಈ ಹಿನ್ನಲೆ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ರಾತ್ರೋರಾತ್ರಿ ಧರಣಿ ನಡೆಸಿದ್ದು, ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಬೆಳ್ತಂಗಡಿಯ ಮೆಲಂತಬೆಟ್ಟು ಎಂಬಲ್ಲಿ ಕಲ್ಲಿನ ಕೋರೆ ನಡೆಯುತ್ತಿದ್ದಲ್ಲಿಗೆ ಶನಿವಾರ ಸಂಜೆ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಕೋರೆಯನ್ನು ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪಡೆದು ಪೊಲೀಸರು ರಾತ್ರಿಯೇ ಮನೆಗೆ ನುಗ್ಗಿ ಆತನನ್ನು ವಶಕ್ಕೆ ಪಡೆದಿದ್ದಾರೆ ಈ ಹಿನ್ನಲೆ ಕಾರ್ಯಕರ್ತರ ಜೊತೆಗೆ ತಡರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದ ಶಾಸಕ ಹರೀಶ್ ಪೂಂಜ, ಪೊಲೀಸರನ್ನು ಏರು ಸ್ವರದಲ್ಲಿ ದಬಾಯಿಸಿದ್ದಾರೆ.

ನೀವು ಕಾಂಗ್ರೆಸ್ ಏಜಂಟರ ರೀತಿ ವರ್ತಿಸ್ತೀರಿ, ನೀವು ಯಾರ ಒತ್ತಡದಲ್ಲಿ ಕೆಲಸ ಮಾಡ್ತಿದೀರಿ ಅಂತ ಗೊತ್ತಿದೆ. ಕಾಂಗ್ರೆಸ್ ಸರ್ಕಾರ ಬಂದಿದೆ ಅಂತ ನಿಮಗೆ ದರ್ಪ ಇದೆ ಎಂದು ಹೇಳಿದ ಶಾಸಕ ಪೂಂಜ, ಪ್ರೊಸೀಜರ್ ಎಂದು ಹೇಳಿದ ಒಬ್ಬ ಪೊಲೀಸ್ ಅಧಿಕಾರಿಗೆ ನಿಮ್ಮ ಪ್ರೊಸೀಜರ್ ಬಗ್ಗೆ ನನಗೆ ನಿಮಗಿಂತ ಹೆಚ್ಚು ಗೊತ್ತಿದೆ. ಎಫ್ಐಆರ್ ಈಗ ಮಾಡಿರೋದಲ್ವಾ.. ಇದನ್ನೆಲ್ಲ ಯಾರ ಒತ್ತಡದಲ್ಲಿ ಮಾಡ್ತಿದ್ದೀರಿ ಅಂತ ನನಗೆ ಗೊತ್ತಿದೆ ಎಂದು ಜೋರು ಧ್ವನಿಯಲ್ಲಿ ಇನ್ಸ್ ಪೆಕ್ಟರ್ ಮತ್ತು ಪೊಲೀಸ್ ಪೇದೆಗಳನ್ನು ಶಾಸಕ ಪೂಂಜ ಜೋರು ಮಾಡಿದ್ದಾರೆ. ನಮ್ಮ ಕಾರ್ಯಕರ್ತನನ್ನು ಬಿಡದಿದ್ದರೆ ನಾನು ಇಲ್ಲಿಂದ ಹೋಗುವುದಿಲ್ಲ. ಇಲ್ಲಿಯೇ ಕೂರುತ್ತೇನೆಂದು ಹೇಳಿ ಪೊಲೀಸ್ ಠಾಣೆಯಲ್ಲಿ ರಾತ್ರಿ ಒಂದು ಗಂಟೆಗೆ ಶಾಸಕ ಪೂಂಜ ತನ್ನ ಜೊತೆಗಿದ್ದ ಕಾರ್ಯಕರ್ತರ ಜೊತೆಗೆ ಧರಣಿ ಕುಳಿತಿದ್ದಾರೆ. ಕೆಲಹೊತ್ತು ಕುಳಿತು ಧಿಕ್ಕಾರ ಕೂಗಿದ್ದಾರೆ.

LEAVE A REPLY

Please enter your comment!
Please enter your name here