ಮಂಗಳೂರು: ಚುನಾವಣಾ ಆಯೋಗ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವಾಗ ಎಷ್ಟು ಎಚ್ಚರವಹಿಸಿದರೂ ಕೂಡ ಕೆಲವೊಂದು ಎಡವಟ್ಟುಗಳು ನಡೆಯುತ್ತಲೇ ಇರುತ್ತದೆ.ಆದರೆ ಇಲ್ಲಿ ಮತದಾರರ ಪಟ್ಟಿಯಲ್ಲಿ ಎರಡು ವಿಚಿತ್ರ ಹೆಸರುಗಳು ಸೇರ್ಪಡೆಯಾಗಿದೆ.
ಇದಕ್ಕಿಂತ ಒಂದು ಹೆಜ್ಜೆ ಹೋಗಿ ನಾಯಿ-ಹಸುಗಳೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡಿದೆ ಎನ್ನವಂತೆ ಎರಡು ಮತ ಚೀಟಿಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಹೆಸರುಗಳು ಹೊಟ್ಟೆ ಹುಣ್ಣಾಗುವಂತೆ ನಗು ತರಿಸಿದರೂ ಮತದಾರರ ಪಟ್ಟಿಯಲ್ಲಿ ಪ್ರಾಣಿಗಳೂ ಸ್ಥಾನ ಪಡೆದಿರುವುದನ್ನು ಕಂಡ ಸಾರ್ವಜನಿಕರು ಈ ರೀತಿಯ ಪ್ರಮಾದ ಎಸಗಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪುತ್ತೂರು ಹಾಗೂ ಮಂಗಳೂರಿನಲ್ಲಿ ಗಡಸ್ ಮತ್ತು ಅಬ್ದುಲ್ ನಾಯಿ ಹೆಸರಿನ ಮತದಾನದ ಚೀಟಿಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಬ್ದುಲ್ ನಾಯಿ ಈ ಚೀಟಿಯ ಪ್ರಕಾರ ಮತದಾರನ ಹೆಸರು ಅಬ್ದುಲ್ ನಾಯಿ ಅಂತ. ಅಷ್ಟಕ್ಕೂ ಇದರ ಅಧಿಕೃತ ಮತದಾರ ಯಾರೆಂದು ತಿಳಿದುಬಂದಿಲ್ಲ. ಅಬ್ದುಲ್ ನಾಯಿ ಎನ್ನುವ ಹೆಸರಿನ ವ್ಯಕ್ತಿ ಪುತ್ತೂರು ವ್ಯಾಪ್ತಿಯಲ್ಲಿ ಬರುತ್ತಿದ್ದು, ಇದರ ಪ್ರಕಾರ ಈ ವ್ಯಕ್ತಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಐತ್ ಹಿರಿಯ ಪ್ರಾಥಮಿಕ ಶಾಲೆ ಗೋಳಿತ್ತಡಿ ನೆಟ್ಟಣಿಗೆ ಮುಳ್ಳೂರು ಗ್ರಾಮ ಎಂದು ಉಲ್ಲೇಖಗೊಂಡಿದೆ. ಇದು ಹೆಸರು ಸೇರ್ಪಡೆಗೊಂಡಾಗ ನಡೆದ ಪ್ರಮಾದವೋ ಅಥವಾ ನಕಲಿ ಹೆಸರೋ ಎನ್ನುವುದು ತಿಳಿದುಬಂದಿಲ್ಲ.
ಗಡಸ್: ಗಡಸ್ ಎಂದರೆ ತುಳುವಲ್ಲಿ ಹರೆಯಕ್ಕೆ ತಲುಪಿದ ಹಸು ಎಂದರ್ಥ. ಹರೆಯಕ್ಕೆ ತಲುಪಿದ ಹಸುವನ್ನು ತುಳುವಲ್ಲಿ ಗಡಸ್ ಎಂದು ಕರೆಯುತ್ತಾರೆ. ಮಂಗಳೂರು ನಗರದ ಉತ್ತರ ವ್ಯಾಪ್ತಿಯಲ್ಲಿ ಬರುವ ಈ ಗಡಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಲ್ಲೂರಿನ ಮತಪಟ್ಟಿಯಲ್ಲಿ ಹೆಸರು ಕಾಣಿಸುವಂತೆ ಈ ಚೀಟಿಯಲ್ಲಿ ಉಲ್ಲೇಖಗೊಂಡಿದೆ.
ಈ ಮತಚೀಟಿಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದಲ್ಲದೆ, ಈ ರೀತಿಯ ಪ್ರಮಾದವನ್ನು ಸರಿಪಡಿಸದ ಚುನಾವಣಾ ಆಯೋಗಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಥಾ ಪ್ರಮಾದಗಳಿಂದಲೇ ನಕಲಿ ಮತದಾನ ನಡೆಯಲು ಕಾರಣವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ಪ್ರಮಾದ ನಡೆಯಬಾರದೆಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.