ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ಮಹಿಳೆಯೊಬ್ಬರು ತಂದೆ ಹಾಗೂ ಪುತ್ರಿಯ ಮುಂದೆಯೇ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ. ನದಿಗೆ ಹಾರುವುದನ್ನು ಪುತ್ರಿ ಹಾಗೂ ಮಹಿಳೆಯ ತಂದೆ ತಡೆಯಲು ಯತ್ನಿಸಿದರೂ ಅವರಿಂದ ತಪ್ಪಿಸಿಕೊಂಡು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕುಮ್ಡೇಲು ನಿವಾಸಿ ಉಮೇಶ್ ಬೆಳ್ಚಡರ ಪತ್ನಿ ಯಶೋಧಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಘಟನೆಯ ಕುರಿತು ಆಕೆಯ ಪುತ್ರಿ ಸಂಪ್ರೀತಾ ನೀಡಿದ ದೂರಿನಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಮೃತ ಯಶೋಧ ಅವರು ಮೂರ್ಛೆ ರೋಗದಿಂದ ಬಳಲುತ್ತಿದ್ದು ಕೆಲವೊಂದು ಬಾರಿ ತೀವ್ರ ಕೋಪಕ್ಕೆ ಒಳಗಾಗಿ ಜಗಳ ಮಾಡುತ್ತಿದ್ದರು. ಹೀಗಾಗಿ ಯಶೋಧ ಅವರ ಗಂಡ 10 ವರ್ಷದ ಹಿಂದೆ ಅವರನ್ನು ಬಿಟ್ಟು ಹೋಗಿದ್ದರು ಎಂದು ತಿಳಿದುಬಂದಿದೆ.


ಏ.15 ರಂದು ರಾತ್ರಿ ಕೂಡಾ ತಂದೆ ಜತೆ ಜಗಳ ಮಾಡಿ ಮಲಗಿದ್ದು , ಮಂಗಳವಾರ ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗಿದ್ದ ಯಶೋಧಾ 9 ರ ಸುಮಾರಿಗೆ ಕರೆ ಮಾಡಿ ತಾನು ಫರಂಗಿಪೇಟೆಯಲ್ಲಿದ್ದು ತನಗೆ ಬದುಕುವುದು ಇಷ್ಟವಿಲ್ಲ ಎಂದು ಕರೆ ಕಡಿತ ಮಾಡಿದ್ದರು. ಈ ವೇಳೆ ಆಕೆಯ ಪುತ್ರಿ ಹಾಗೂ ತಂದೆ ಆಟೋದಲ್ಲಿ ತಕ್ಷಣ ಸ್ಥಳಕ್ಕೆ ತೆರಳಿದಾಗ ನದಿ ಕಡೆ ವೇಗವಾಗಿ ಹೋಗುತ್ತಿದ್ದು, ಓಡಿ ಹೋಗಿ ಹಿಡಿದಾಗ ತಪ್ಪಿಸಿಕೊಂಡು ಏಕಾಏಕಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.