ಮಂಗಳೂರು: ಪ್ರಧಾನಿ ಮೋದಿಯವರು ಮಂಗಳೂರು ನಗರದಲ್ಲಿ ಇದೇ ಮೊದಲ ಬಾರಿಗೆ ರೋಡ್ ಶೋ ನಡೆಸಿದ್ದು, ಅತ್ಯಧಿಕ ಸಂಖ್ಯೆಯ ಅಭಿಮಾನಿಗಳಿಗೆ ಹತ್ತಿರದಿಂದ ದರ್ಶನ ನೀಡಿದ್ದಾರೆ. ಮೋದಿಯವರದ್ದು ಮಂಗಳೂರು ಭೇಟಿ ಇದು ಹತ್ತನೇ ಬಾರಿಯದ್ದು. ಈ ಹಿಂದೆಲ್ಲಾ ಬೃಹತ್ ಸಭೆಗಳನ್ನು ಉದ್ದೇಶಿ ಮಾತನಾಡಿ ತೆರಳುತ್ತಿದ್ದ ಮೋದಿ ಈ ಬಾರಿ ಅಭಿಮಾನಿಗಳಿಗೆ ಕೈಬೀಸುತ್ತಲೇ ರೋಡ್ ಶೋ ನಡೆಸಿದ್ದಾರೆ. ಆಮೂಲಕ ಮೋದಿ ರೋಡ್ ಶೋ ಮಂಗಳೂರಿನ ಮಟ್ಟಿಗೆ ಹಲವು ದಾಖಲೆಗಳನ್ನು ಬರೆದಿದ್ದಂತೂ ಸತ್ಯ.



ಪೊಲೀಸ್ ಮೂಲಗಳ ಪ್ರಕಾರ, ಮಂಗಳೂರಿನಲ್ಲಿ ಸೇರಿದ ಜನರ ಸಂಖ್ಯೆ ಒಂದೂವರೆಯಿಂದ ಎರಡು ಲಕ್ಷದಷ್ಟು. ರೋಡ್ ಶೋ ಮುಗಿದ ಬಳಿಕ ಜನರನ್ನು ಕ್ಲಿಯರ್ ಮಾಡಲು ಪೊಲೀಸರಿಗೆ 40 ನಿಮಿಷ ತಗಲಿದೆಯಂತೆ. ನಾರಾಯಣ ಗುರು ಸರ್ಕಲ್ ನಿಂದ ಹಿಡಿದು ಲಾಲ್ ಬಾಗ್, ಬಳ್ಳಾಲ್ ಬಾಗ್, ಪಿವಿಎಸ್, ನವಭಾರತ ವೃತ್ತದ ವರೆಗೂ ಜಾಮ್ ಟೈಟ್ ಜನರು ಸೇರಿದ್ದರು. ಅಂದರೆ, ರಸ್ತೆಯ ಇಕ್ಕೆಲಗಳಲ್ಲೂ ಭಾರೀ ಸಂಖ್ಯೆಯಲ್ಲಿ ಜನರು ಮೋದಿ ನೋಡಲು ನೆರೆದಿದ್ದರು. ಕಡಲ ತಡಿಯ ಜನರು ಸಿನಿಮಾ ಸೆಲೆಬ್ರಿಟಿ ಅಥವಾ ಯಾವುದೇ ಮೆಚ್ಚಿನ ನಾಯಕ ಬಂದರೂ ನೋಡಲು ಬರುವುದಿಲ್ಲ. ರಾಜಕೀಯ ನಾಯಕರೊಬ್ಬರ ಪ್ರಚಾರ ಜಾಥಾಕ್ಕೆ ಇಷ್ಟೊಂದು ಜನ ಸೇರಿದ್ದೂ ಕರಾವಳಿ ಮಟ್ಟಿಗೆ ಹೊಸ ದಾಖಲೆ.


ಕೈಸಾ ಹೋ ಭಟ್ ಜೀ ಎಂದ ಮೋದಿ
ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆಗೈದ ಮೋದಿಯವರನ್ನು ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಕಡೆಗೋಲು ಹಿಡಿದ ಉಡುಪಿ ಕೃಷ್ಣನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಉತ್ಸವ ಸಂದರ್ಭಗಳಲ್ಲಿ ದೇವರನ್ನು ಹೊರುವ ಚಿತ್ರಣದಂತಿರುವ ಕೃಷ್ಣನ ಪ್ರತಿಮೆ ಆಕರ್ಷಕವಾಗಿತ್ತು. ಅಲ್ಲಿಂದಲೇ ಮೋದಿಯವರು ವಾಹನ ಏರಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲಿದ್ದ ಮಾಜಿ ಶಾಸಕ ಯೋಗೀಶ್ ಭಟ್ ಅವರನ್ನು ಕಂಡು ಮೋದಿಯವರು, ಕೈಸಾ ಹೋ ಭಟ್ ಜೀ ಅಂತ ಹೇಳಿ ಹತ್ತಿರ ಬಂದಿದ್ದಾರೆ. ಯೋಗೀಶ್ ಭಟ್ ಅವರ ಕಣ್ಣು ಮಂಜಾಗಿರುವುದನ್ನು ತಿಳಿದು ಕಣ್ಣಿನ ಸಮಸ್ಯೆಯೇನು ಎಂದು ಕೇಳಿದ್ದಾರೆ. ಯೋಗೀಶ್ ಭಟ್ ಅವರು ತಮ್ಮ ಕಣ್ಣಿಗೆ ಸಮಸ್ಯೆ ಆಗಿರುವುದನ್ನು ಮೋದಿ ಬಳಿ ಹೇಳಿಕೊಂಡಿದ್ದಾರೆ. ಮೋದಿ ಅವರಿಗೆ ಗುಜರಾತ್ ಮುಖ್ಯಮಂತ್ರಿ ಆಗೋದಕ್ಕೂ ಮೊದಲೇ ಯೋಗೀಶ್ ಭಟ್ ಅವರ ಪರಿಚಯ ಇತ್ತು.
ಕಲಾವಿದನ ಚಿತ್ರ ಕೇಳಿ ಪಡೆದ ಮೋದಿ
ರೋಡ್ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ಎಂಪೈರ್ ಮಾಲ್ ಬಳಿ ಜನರ ನಡುವೆ ಕಲಾವಿದರೊಬ್ಬರು ಕೈಯಲ್ಲಿ ಬಿಡಿಸಿದ ಮೋದಿಯ ತೈಲ ಚಿತ್ರವನ್ನು ತೋರಿಸಿದ್ದಾರೆ. ತೊಕ್ಕೊಟ್ಟಿನ ಪಿಲಾರ್ ನಿವಾಸಿ ಚಿತ್ರ ಕಲಾವಿದ ಕಿರಣ್ ಮೋದಿಯವರ ತೈಲ ಚಿತ್ರ ಬಿಡಿಸಿ ತಂದಿದ್ದರು. ಅದನ್ನು ನೋಡಿದ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಚಿತ್ರವನ್ನು ಎಸ್ ಪಿಜಿ ಮೂಲಕ ಪಡೆದುಕೊಳ್ಳಲು ಸೂಚಿಸಿದ್ದಾರೆ. ಎಸ್ ಪಿಜಿ ಭದ್ರತಾ ಸಿಬಂದಿ ತೈಲ ಚಿತ್ರವನ್ನು ಪಡೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ. ಮೋದಿಯವರ ನಡೆ ಕಲಾವಿದನಿಗೂ ಜನರ ನಡುವೆ ಇದ್ದ ತನ್ನನ್ನು ಗುರುತಿಸಿದರು ಎಂಬ ಹೆಮ್ಮೆ ತಂದಿದೆ.
ಮೋದಿ ಜೊತೆ ಸೇಫ್ ಗಾರ್ಡ್ ಆಗಿ ನಿಂತ ಸೈನಿಕ
ರೋಡ್ ಶೋ ಉದ್ದಕ್ಕೂ ಭಾರೀ ಸಂಖ್ಯೆಯಲ್ಲಿ ಸೇರಿದ ಜನರನ್ನು ನೋಡಿ ಮೋದಿಗೂ ಅಚ್ಚರಿಯಾಗಿದೆ. ಕೆಲವು ಕಡೆಗಳಲ್ಲಿ ಜನರು ಮೋದಿ ಮೋದಿ ಎನ್ನುತ್ತ ಹುಚ್ಚೆದ್ದು ಕುಣಿಯುತ್ತಿರುವುದನ್ನು ನೋಡಿ ತನ್ನಲ್ಲಿ ಬರುತ್ತಿದ್ದ ಹೂಗಳನ್ನು ಮತ್ತೆ ಜನರ ಮೇಲೆ ಎಸೆದಿದ್ದೂ ಕಂಡುಬಂತು. ಇದೇ ವೇಳೆ, ಕೆಲವರು ತಮ್ಮ ಹೂವು ನೇರವಾಗಿ ಮೋದಿಯ ಮೈಮೇಲೆ ಬೀಳಬೇಕು ಎಂದು ಬಿರುಸಿನಿಂದ ಎಸೆಯುತ್ತಿದ್ದರು. ಆದರೆ ಮೋದಿ ಮೈಮೇಲೆ ಬೀಳುತ್ತಿದ್ದ ಹೂವುಗಳ ಹಿಂಡನ್ನು ಜೊತೆಗಿದ್ದ ಮಾಜಿ ಸೇನಾನಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅಷ್ಟೇ ಚಾಕಚಕ್ಯತೆಯಿಂದ ತಡೆಯುತ್ತಿದ್ದರು. ಎಸ್ ಪಿಜಿ ಯೋಧರು ತಮ್ಮ ನಾಯಕರ ಸೇಫ್ ಗಾರ್ಡ್ ಮಾಡುವ ರೀತಿ ಸ್ವತಃ ಸೇನೆಯಲ್ಲಿದ್ದ ಅನುಭವದಿಂದಾಗಿ ಚೌಟ ಮೋದಿಯವರ ಜೊತೆಗೆ ರಕ್ಷಕನಾಗಿ ನಿಂತು ಸೈನಿಕ ಪ್ರಜ್ಞೆಯನ್ನು ತೋರಿಸುತ್ತಿದ್ದರು. ರೋಡ್ ಶೋ ಉದ್ದಕ್ಕೂ ಮೋದಿ ಮೈಮೇಲೆ ಬೀಳುತ್ತಿದ್ದ ಹೂವುಗಳ ಹಿಂಡನ್ನು ಯೋಧನ ರೀತಿ ಚೌಟ ತಡೆಯುತ್ತಾ ಸಾಗಿದ್ದು ಜನರ ಗಮನ ಸೆಳೆಯಿತು.
ಕೊನೆಯಲ್ಲಿ ನವಭಾರತ್ ಸರ್ಕಲ್ ಬಳಿ ರೋಡ್ ಶೋ ಕೊನೆಗೊಳ್ಳುತ್ತಿದ್ದಂತೆ, ಕ್ಯಾ.
ಬ್ರಿಜೇಶ್ ಚೌಟ ಮತ್ತು ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಹರಸಿ ಮುಂದೆ ದೆಹಲಿಯಲ್ಲಿ ಸಿಗೋಣ ಎಂದು ಹೇಳಿ ಕಾರಿನಲ್ಲಿ ಹೊರಟರು. ಆಬಳಿಕ ತಮ್ಮ ಕಾರಿನಲ್ಲಿ ಬಾಗಿಲ ಬಳಿ ನಿಂತೇ ಕೆಎಸ್ ರಾವ್ ರಸ್ತೆ ಮತ್ತು ಹಂಪನಕಟ್ಟೆಯ ರಸ್ತೆ ಉದ್ದಕ್ಕೂ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರತ್ತ ಕೈಬೀಸಿದ್ದಾರೆ. ಒಟ್ಟಿನಲ್ಲಿ ಮೋದಿಯವರು ಮಂಗಳೂರಿನಲ್ಲಿ ಮಾಡಿದ ರೋಡ್ ಶೋ ಅಭಿಮಾನಿಗಳ ಪಾಲಿಗೆ ಹೊಸ ಝಲಕ್ ನೀಡಿದ್ದರೆ, ಮೋದಿಯವರಿಗೂ ಹೊಸ ಹುರುಪು ತಂದಿದೆ. ಇದೇ ಕಾರಣಕ್ಕೆ ಮೋದಿಯವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಂಗಳೂರಿನ ಜನರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬರೆದುಕೊಂಡಿದ್ದಾರೆ.
ಮೋದಿ ಸ್ವಾಗತಕ್ಕೆ ಪ್ರವೀಣ್ ನೆಟ್ಟಾರು ತಾಯಿ
ಮೋದಿ ಏರ್ಪೋರ್ಟ್ ಬರುತ್ತಲೇ ನಗರದ ಪ್ರಥಮ ಪ್ರಜೆ ಸೇರಿ ಪಕ್ಷದ ನಾಯಕರು ಸ್ವಾಗತಿಸುವುದು ಕ್ರಮ. ಈ ಬಾರಿ ಬಿಜೆಪಿ ನಾಯಕರ ಜೊತೆಗೆ ಎರಡು ವರ್ಷಗಳ ಹಿಂದೆ ದುಷ್ಕರ್ಮಿಗಳ ಸಂಚಿಗೆ ಬಲಿಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ತಾಯಿ ರತ್ನಾವತಿ ಅವರೂ ಸಾಥ್ ನೀಡಿದ್ದರು. ಮೋದಿಯವರು ತಾಯಿ ಬಳಿ ನಿಂತು ಕೈಮುಗಿದು ನಮಸ್ಕರಿಸಿ ಮುಂದೆ ನಡೆದಿದ್ದು ವಿಶೇಷವಾಗಿತ್ತು.