ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸುತ್ತಿದ್ದ ಸಮೀಪದ ರಸ್ತೆಯ ಬಿಜೈ ಕೆಎಸ್ಸಾರ್ಟಿಸಿ ಪಕ್ಕದ ಕಟ್ಟಡವೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದ ಘಟನೆ ರವಿವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಔಷಧಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದ್ದು, ಔಷಧಿಗಳು ಸುಟ್ಟುಕರಲಾಗಿದೆ ಎಂದು ತಿಳಿದು ಬಂದಿದೆ.
ನಗರದ ಬಿಜೈ ಕೆಎಸ್ಸಾರ್ಟಿಸಿ ಸಮೀಪದ ಸುರಭಿ ಹೋಟೆಲ್ ಬಳಿಯ ಹಳೆಯ ಕಟ್ಟಡವೊಂದರ ಮೊದಲ ಮಹಡಿಯಲ್ಲಿ ಈ ಅನಾಹುತ ಸಂಭವಿಸಿದೆ.
ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಆರಂಭಗೊಳ್ಳುವ ಕೆಲವೇ ನಿಮಿಷಕ್ಕೆ ಮುನ್ನ ಈ ಅವಘಡ ಸಂಭವಿಸಿತ್ತು. ಕದ್ರಿ ಅಗ್ನಿಶಾಮಕ ಠಾಣೆಯ ವ್ಯಾಪ್ತಿಗೆ ಈ ಅವಘಡದ ಪ್ರದೇಶ ಬರುತ್ತದೆ. ಆದರೆ, ಹೆಚ್ಚಿನ ಸಿಬ್ಬಂದಿ ವರ್ಗವು ಮೋದಿ ರೋಡ್ ಶೋ ಕಾರ್ಯಕ್ರಮದ ಮುನ್ನೆಚ್ಚರಿಕೆಯ ಭಾಗವಾಗಿ ತೆರಳಿದ್ದರು. ಹಾಗಾಗಿ ಪಾಂಡೇಶ್ವರದಿಂದ ತೆರಳಿದ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗವು ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ.
ಪ್ರಧಾನಿ ನರೇಂದ್ರ ಮೋದಿಯ ರೋಡ್ ಶೋ ಸಂದರ್ಭವೇ ಈ ಅನಾಹುತ ನಡೆದಿರುವುದರಿಂದ ಹಿರಿಯ ಅಧಿಕಾರಿಗಳಿಗೆ ಇದು ಸವಾಲಾಗಿ ಪರಿಣಮಿಸಿತ್ತು.
ರೆಫ್ರಿಜರೇಟರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ. ಕಟ್ಟಡದ ಒಳಗೆ ಹೋಗುವ ದಾರಿ ತುಂಬಾ ಕ್ಲಿಷ್ಟಕರವಾಗಿತ್ತು. ಹಾಗಾಗಿ ಕಾರ್ಯಾಚರಣೆ ಸ್ವಲ್ಪ ವಿಳಂಬವಾಯಿತು. ಆದರೆ ಔಷಧಿಗಳು ಸುಟ್ಟುಹೋಗಿದ್ದರಿಂದ ಕೊಠಡಿಯ ತುಂಬ ಹೊಗೆ ಕಾಣಿಸಿಕೊಂಡಿತ್ತು. ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ಹರಡದಂತೆ ಕ್ರಮ ವಹಿಸಲಾಗಿತ್ತು ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.