ಮಂಗಳೂರು: ದೇಶದಲ್ಲಿ ಲೋಕಸಭಾ ಚುನಾವಣೆಯ ರಂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಸ್ಟಾಟರ್ಜಿ ಮೂಲಕ ಚುನಾವಣೆ ಗೆಲ್ಲಲು ತಯಾರಿ ನಡೆಸುತ್ತಿದೆ. ಈ ಸ್ಟಾಟರ್ಜಿಯಲ್ಲಿ ಮೊದಲಿಗೆ ಬರುವುದೇ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಈಗಾಗಲೇ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಎಡವಿ ಅಧಿಕಾರ ಕಳೆದುಕೊಂಡಿರುವುದು ಎಲ್ಲರಿಗೂ ತಿಳಿದ ಸಂಗತಿ. ಇದನ್ನು ಸ್ವತಃ ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ ಕೂಡ. ಆದರೆ ಮತ್ತೆ ಈ ತಪ್ಪು ಮರುಕಳಿಸದಂತೆ ತಡೆಯಲು ಸಂಘಪರಿವಾರ ಸಿದ್ಧತೆ ನಡೆಸಿದ್ದು, ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿ ಸೂಕ್ತ ಎಂಬುದನ್ನು ಈಗಿಂದಲೇ ಜನಾಭಿಪ್ರಾಯ ಸಂಗ್ರಹಿಸಲು ಆರಂಭಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಹೊಸ ಹೊಸ ಹೆಸರು ಚಾಲ್ತಿಯಲ್ಲಿದ್ದು, ರಾಜ್ಯದ 28 ಕ್ಷೇತ್ರದಲ್ಲಿ ಒಂದೊಂದು ಹೆಸರು ಮುಂಚೂಣಿಗೆ ಬರುತ್ತಿದೆ. ಇದಕ್ಕೆ ದಕ್ಷಿಣ ಕನ್ನಡ ಕೂಡ ಹೊರತಾಗಿಲ್ಲ.
ಈಗಾಗಲೇ ಹ್ಯಾಟ್ರಿಕ್ ಗೆಲುವು ಸಾಧಿಸಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲು ಅವರ ಜಾಗಕ್ಕೆ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಜಿಲ್ಲೆಯಾದ್ಯಂತ ಅಭಿಪ್ರಾಯ ಕೇಳಿ ಬರುತ್ತಿದ್ದು, ನಳಿನ್ ನಂತರ ಯಾರು ಎಂಬ ಪ್ರಶ್ನೆಗೆ ಕಟ್ಟರ್ ಹಿಂದುತ್ವವಾದಿ ಪೋಸ್ಟ್‌ಕಾರ್ಡ್ ಮಹೇಶ್ ವಿಕ್ರಮ್ ಹೆಗ್ಡೆ ಹೆಸರು ಮುಂಚೂಣಿಯಲ್ಲಿದೆ. ಅದೇ ರೀತಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಹೆಸರು ಕೂಡ ಜೋರಾಗಿ ಕೇಳಿ ಬರುತ್ತಿದ್ದು, ಈ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ನೀಡುವಂತೆ ಸಂಘಪರಿವಾರದ ಒಳಗಿಂದ ಒತ್ತಡವಿದೆ ಎಂಬ ಸುದ್ದಿಯೂ ಇದೆ. ಆದರೆ ಪಕ್ಷದ ತೀರ್ಮಾನ ಏನು ಎಂಬುದನ್ನು ಕಾದು ನೋಡಬೇಕು.
ಮಹೇಶ್ ವಿಕ್ರಮ್ ಹೆಗ್ಡೆ ಯವರನ್ನು ಟ್ವಿಟರ್ ನಲ್ಲಿ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಫಾಲೋ ಮಾಡುತ್ತಿದ್ದು, ಇವರ ಜನಪ್ರಿಯತೆಗೆ ಸಾಕ್ಷಿ. ಮತ್ತೊಂದೆಡೆ ಬ್ರಿಜೇಶ್ ಚೌಟ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರಾದ್ದರಿಂದ ಅವರಿಗೆ ಅವಕಾಶ ನೀಡಿದರು ಉತ್ತಮ ಎಂಬುದು ಜನರ ಅಭಿಪ್ರಾಯ.
ಒಟ್ಟಾರೆಯಾಗಿ ಬಿಜೆಪಿ ಹೈಕಮಾಂಡ್‌ನ ನಡೆ ಪ್ರತೀ ಬಾರಿ ಅಚ್ಚರಿ ಮೂಡಿಸುತ್ತದೆ ಎಂಬುದು ಎಷ್ಟು ಸತ್ಯವೋ, ಅದೇ ರೀತಿ ಈ ಬಾರಿ ಹಿಂದುತ್ವದ ಭದ್ರಕೋಟೆ ದಕ್ಷಿಣ ಕನ್ನಡದಲ್ಲಿ ಯಾವ ರೀತಿಯ ಅಚ್ಚರಿಯ ಬೆಳವಣಿಗೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.