ಮಂಗಳೂರು: 2021 ರಲ್ಲಿ ಉಳ್ಳಾಲ ಠಾಣೆಯಲ್ಲಿ ದಾಖಲಾದ ಪೋಕ್ಸೋ ಪ್ರಕರಣ (Pocso case)ಕ್ಕೆ ಸಂಬಂಧಿಸಿದಂತೆ ಆರೋಪಿ ಅಬೂಬಕ್ಕರ್ ಸಿದ್ದಿಕ್ @ ಸಿದ್ದಿಕ್ ಉಳ್ಳಾಲ್ ಎಂಬವರನ್ನು ಆರೋಪ ಮುಕ್ತಗೊಳಿಸಿ ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಮಂಗಳೂರಿನ ವಿಶೇಷ ಪೋಕ್ಸೊ ಮತ್ತು ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ವಾಸವಾಗಿದ್ದ ಸಿದ್ದಿಕ್ ಉಳ್ಳಾಲ್ ತನ್ನ ಊರಿನ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಆಕೆಯ ಮಗಳು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಲಾಗಿತ್ತು.
ಆರೋಪಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಆಕೆಯ ಮಗಳು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂಬುದು ತನಿಖೆ ಮತ್ತು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದೆ ಎಂದು ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿಸಲ್ಲಿಸಿದ್ದರು.
ಆದರೆ ಅಭಿಯೋಜನೆಯು ಅಪರಾಧವನ್ನು ಸಾಬೀತುಮಾಡಲು ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟು ಮಾನ್ಯ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿ ಆದೇಶ ನೀಡಿತು.
ಆರೋಪಿಯ ಪರವಾಗಿ ಮಂಗಳೂರಿನ ಲೆಕ್ಸ್ ಜ್ಯೂರೀಸ್ ಲಾ ಚೇಂಬರ್ ಇದರ ವಕೀಲರಾದ ಓಮರ್ ಫಾರೂಕ್ ಮುಲ್ಕಿ, ಮಹಮ್ಮದ್ ಅಸ್ಗರ್ ಮುಡಿಪು, ಹೈದರ್ ಅಲಿ ಕಿನ್ನಿಗೋಳಿ , ತೌಸೀಪ್ ಸಚ್ಚರಿಪೇಟೆ, ಮುಹಮ್ಮದ್ ರಿಫಾಝ್ ಬೆಂಗ್ರೆರವರು ವಾದಿಸಿದ್ದರು.