ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬೃಹತ್ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಗೆ ಎಸಿಪಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿ ಹಾಗೂ ಸಾಮಾಗ್ರಿಗಳನ್ನು ವಶಕ್ಕೆ ಪಡೆದಿದೆ. ಅಬ್ದುಲ್ ಅಲ್ತಾಫ್ (49) ಬಂಧಿತ ಆರೋಪಿ. ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯಾ ನಾಯಕ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ, ಆರೋಪಿ ಸಮೇತ 51 ಗ್ಯಾಸ್ ಸಿಲಿಂಡರ್ ಗಳನ್ನ ಹಾಗೂ ಅಕ್ರಮವಾಗಿ ಇರಿಸಿದ್ದ 280 ಲೀಟರ್ ಪೆಟ್ರೋಲನ್ನೂ ವಶಪಡಿಸಿಕೊಂಡು, ಆರೋಪಿ ಅಬ್ದುಲ್ ಅಲ್ತಾಫ್ ನನ್ನು ಬಂಧಿಸಿದೆ. ಆರೋಪಿ ತನ್ನ ಮನೆಯ ಮುಂಭಾಗದಲ್ಲಿ ತೋರ್ಪಡಿಕೆಗೆ ಗುಜರಿ ಅಂಗಡಿ ನಡೆಸುತ್ತಿದ್ದು, ಮನೆಯೊಳಗಿನ ವಿಶಾಲ ಪ್ರದೇಶದಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಗಳನ್ನು ದಾಸ್ತಾನು ಇರಿಸಿ ರೀಫಿಲ್ಲಿಂಗ್ ಮಾಡುತ್ತಿದ್ದ. ಜತೆಗೆ ಸ್ಥಳೀಯ ನಾಡ ದೋಣಿಗಾರರಿಗೆ ದುಪ್ಪಟ್ಟು ದರದಲ್ಲಿ ಪೆಟ್ರೋಲನ್ನು ದಾಸ್ತಾನು ಇರಿಸಿ ಮಾರಾಟ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಎಸಿಪಿಯ ತಂಡ ದಾಳಿ ನಡೆಸಿದೆ.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.