Home ತಾಜಾ ಸುದ್ದಿ ರೋಗಿ, ಕುಟುಂಬಸ್ಥರು ಒಪ್ಪದಿದ್ದರೆ ಐಸಿಯುಗೆ ದಾಖಲಿಸುವಂತಿಲ್ಲ: ಕೇಂದ್ರ ಸೂಚನೆ

ರೋಗಿ, ಕುಟುಂಬಸ್ಥರು ಒಪ್ಪದಿದ್ದರೆ ಐಸಿಯುಗೆ ದಾಖಲಿಸುವಂತಿಲ್ಲ: ಕೇಂದ್ರ ಸೂಚನೆ

0

ನವದೆಹಲಿ: ರೋಗಿ ಹಾಗೂ ಆತನ ಸಂಬಂಧಿಕರು ಒಪ್ಪಿಗೆ ಸೂಚಿಸಿದರೆ ಮಾತ್ರ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಕೊಡಿಸಬಹುದು. ಒಂದು ವೇಳೆ ಅವರು ವಿರೋಧಿಸಿದರೆ ಐಸಿಯುಗೆ ದಾಖಲಿಸುವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಆಸ್ಪತ್ರೆಗಳಲ್ಲಿ ರೋಗಿಗಳನ್ನು ಐಸಿಯುಗೆ ದಾಖಲಿಸುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಯನ್ನು 24 ಮಂದಿ ತಜ್ಞರು ಚರ್ಚಿಸಿ ಬಿಡುಗಡೆ ಮಾಡಿದ್ದಾರೆ. ಮಾರ್ಗಸೂಚಿಯ ಪ್ರಕಾರ ಯಾವುದೇ ರೋಗಿಗೆ ಬಲವಂತವಾಗಿ ಐಸಿಯುನಲ್ಲಿ ಚಿಕಿತ್ಸೆ ಕೊಡಿಸುವಂತಿಲ್ಲ. ರೋಗಿಗೆ ಹೆಚ್ಚಿನ ಚಿಕಿತ್ಸೆ ಪ್ರಯೋಜನವಿಲ್ಲದೇ ಇದ್ದಲ್ಲಿ ಅಥವಾ ಯಾವುದೇ ಚಿಕಿತ್ಸೆ ನೀಡಿದರೂ ರೋಗಿಯ ಆರೋಗ್ಯದಲ್ಲಿ ಚೇತರಿಕೆ ಕಾಣಿಸದೇ ಇದ್ದರೆ ಅವರಿಗೆ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡುವುದು ವ್ಯರ್ಥವೆಂದು ಹೇಳಲಾಗಿದೆ.

ಸಾಂಕ್ರಾಮಿಕ ರೋಗಗಳು, ವಿಪತ್ತು ಸಂದರ್ಭದಲ್ಲಿ ರೋಗಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಬಹುದು. ರೋಗಿಗೆ ಅಂಗಾಂಗ ವೈಫಲ್ಯ, ಅಂಗಾಂಗ ಕಸಿ ಅಥವಾ ವೈದ್ಯಕೀಯ ಸ್ಥಿತಿ ಕ್ಷೀಣಿಸುವ ನಿರೀಕ್ಷೆ ಇದ್ದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಐಸಿಯುಗೆ ದಾಖಲಿಸಬೇಕು. ಹೃದಯ ಸಂಬಂಧಿ ಸಮಸ್ಯೆ, ಉಸಿರಾಟ ಸಮಸ್ಯೆ, ಯಾವುದಾದರೂ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಹೀಗೆ ತೀವ್ರವಾಗಿ ಅನಾರೋಗ್ಯ ಪೀಡಿತರಾಗಿದ್ದರೆ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಬಹುದು ಎಂದು ನಿಯಮಗಳಲ್ಲಿ ತಿಳಿಸಲಾಗಿದೆ.

ಇವಿಷ್ಟೇ ಅಲ್ಲದೆ ಮಾರ್ಗಸೂಚಿಯ ಅನುಸಾರ ರೋಗಿಯನ್ನು ಐಸಿಯುಗೆ ದಾಖಲಿಸುವ ಮೊದಲು ರೋಗಿಯ ರಕ್ತದೊತ್ತಡ, ನಾಡಿ ಬಡಿತ, ಹೃದಯ ಬಡಿತ, ಆಮ್ಲಜನಕ ಹೀರಿಕೊಳ್ಳುವ ಸಾಮರ್ಥ್ಯ, ಮೂತ್ರ ವಿಸರ್ಜನೆಯ ಪ್ರಮಾಣ, ನರದ ಸ್ಥಿತಿಗತಿ ಮೊದಲಾದವುಗಳ ಪರಿಶೀಲಿಸಬೇಕು. ಆ ಬಳಿಕವಷ್ಟೇ ರೋಗಿಯನ್ನು ಐಸಿಯುನಲ್ಲಿ ದಾಖಲಿಸಿಕೊಳ್ಳಬಹುದು ಎಂದು ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here