ಮಂಗಳೂರು: ಶಿಕ್ಷಣ ಸಂಸ್ಥೆಯೊಳಗೆ ಹಿಜಾಬ್ ತರುವುದಾದಲ್ಲಿ ಮುಂದಿನ ದಿನಗಳಲ್ಲಿ ಹಿಂದೂ ಕಾರ್ಯಕರ್ತರಿಗೂ ಕೇಸರಿ ಶಾಲು ಹಾಕಿ ಹೋಗುವ ವಾತಾವರಣ ಸೃಷ್ಟಿಸಿದರೆ ಏನು ತಪ್ಪು. ಶಬರಿಮಾಲಾ ವೃತಾಧಾರಿಗಳು ಕಪ್ಪುಬಟ್ಟೆ ಧರಿಸಿ ಹೋದರೆ ಏನು ತಪ್ಪು ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಶ್ನಿಸಿದರು ಮಂಗಳೂರಿನಲ್ಲಿ ಸಿಎಂ ಅವರ ಹಿಜಾಬ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ ಮಾತ್ರ ಸಿಎಂ ಅಲ್ಲ. ರಾಜ್ಯದ ಎಲ್ಲಾ ಧರ್ಮದವರಿಗೂ ಸಿಎಂ. ಹಿಜಾಬ್ ವಿಚಾರ ಈಗಾಗಲೇ ಕೋರ್ಟ್ ಅಂಗಳದಲ್ಲಿದೆ. ಇಂತಹ ವಿಚಾರವನ್ನು ಸಾರ್ವಜನಿಕವಾಗಿ ಎತ್ತುವಂತಿಲ್ಲ ಎಂಬ ಸಾಮಾನ್ಯಜ್ಞಾನ ಸಿದ್ದರಾಮಯ್ಯರಿಗಿಲ್ಲ. ಸಿಎಂ ಸ್ಥಾನದಲ್ಲಿರುವವರು ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಬಾರದು. ಆದರೂ ಅಲ್ಪಸಂಖ್ಯಾತರಿಗೆ ಓಲೈಕೆ ಮಾಡುವ ರೀತಿಯ ಉತ್ತರವನ್ನು ನೀಡುತ್ತಿದ್ದಾರೆ. ಈ ಸರಕಾರ ಅಲ್ಪಸಂಖ್ಯಾತರಿಗೆ ದೊಡ್ಡ ರೀತಿಯಲ್ಲಿ ಅವಕಾಶಗಳನ್ನು ಕಲ್ಪಿಸಿ ಹಿಂದೂಗಳಿಗೆ ಯಾವುದೇ ಪೂರಕ ವಾತಾವರಣ ಸೃಷ್ಟಿಸುವುದಿಲ್ಲ ಎಂಬುದು ಖಾತ್ರಿಯಾಗಿದೆ ಎಂದರು. ಯಾರೇ ಆದರೂ ಶಿಕ್ಷಣ ಕ್ಷೇತ್ರದೊಳಗಡೆ ಬಂದಾಗ ಅಲ್ಲಿ ಧಾರ್ಮಿಕ ಚಿಂತನೆಗಳಿರಬಾರದು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರನ್ನೂ ಸರಿಸಮಾನರಾಗಿ ಕಾಣಬೇಕು. ತರಗತಿಯೊಳಗಡೆಯೂ ವಿಭಜಿಸುವ ಕಾರ್ಯ ಆಗಬಾರದು. ಅದಕ್ಕಾಗಿಯೇ ಯೂನಿಫಾರಂ ವ್ಯವಸ್ಥೆ ಬಂದಿರುವುದು. ಅಲ್ಲದೆ ಹಿಜಾಬ್ ಹಾಕಿಕೊಂಡವರು ಅದರೊಳಗಡೆ ಯಾರಿಗೂ ಗೊತ್ತಾಗದಂತೆ ಬ್ಲೂಟುತ್ ಹಾಕಿ ಪರೀಕ್ಷೆಯನ್ನು ಬರೆಯಬಹುದು ಎಂಬಂಥಂಹ ಮಾತುಗಳು ಕೇಳಿ ಬರುತ್ತಿದೆ. ಜೊತೆಗೆ ಅಲ್ಪಸಂಖ್ಯಾತರೇ ಆಗಿರುವ ಈಗಿನ ಸಭಾಧ್ಯಕ್ಷರು ಹಿಜಾಬ್ ಗಲಾಟೆ ಎದ್ದ ಸಂದರ್ಭ ಹೇಳಿರುವ ಉತ್ತರವನ್ನು ಮತ್ತೊಮ್ಮೆ ಪರಿಶೀಲಿಸುವುದು ಒಳಿತು ಎಂದು ಹೇಳಿದರು. ಈಗ ಸಿಎಂ ಹೇಳಿಕೆಗೂ, ಅಂದು ಸಭಾಧ್ಯಕ್ಷರು ನೀಡಿರುವ ಹೇಳಿಕೆಗೂ ವ್ಯತ್ಯಾಸ ಕಂಡು ಬರುತ್ತಿದೆ. ಅವರು ಮುಸಲ್ಮಾನ ಸಮುದಾಯದವರಾಗಿಯೇ ನೀಡಿರುವ ಹೇಳಿಕೆ ಕಂಡಾಗ ಸಿಎಂ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ಮುಸಲ್ಮಾನರನ್ನು ಮೆಚ್ಚಿಸಲು ಹೊರಟಿದ್ದಾರೆ ಎಂದೆನಿಸುತ್ತದೆ. ಇದು ಬಹಳ ದೊಡ್ಡ ತಪ್ಪು. ಇದನ್ನೆಲ್ಲಾ ಜನರು ಗಮನಿಸುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಇನ್ನಷ್ಟು ಸೀಟು ಹೆಚ್ಚು ಗಳಿಸಬೇಕೆಂದು ಈ ರೀತಿಯ ರಾಜಕೀಯ ಹೇಳಿಕೆಯನ್ನು ಸಿಎಂ ನೀಡುತ್ತಿದ್ದಾರೆ. ಇದನ್ನು ನೋಡಿದಾಗ ಇದು ಹಿಂದೂಗಳಿಗಿರುವ ಸರಕಾರವಲ್ಲ. ಅಲ್ಪಸಂಖ್ಯಾತರಿಗೆ ಇರುವ ಸರಕಾರ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು.
Home ಕರಾವಳಿ ಮಂಗಳೂರು: ತರಗತಿಯಲ್ಲಿ ಹಿಜಾಬ್ ಧರಿಸೋದಾದ್ರೆ ಕೇಸರಿ ಶಾಲು ಹಾಕಿದ್ರೆ ತಪ್ಪೇನು..?- ಶಾಸಕ ವೇದವ್ಯಾಸ ಕಾಮತ್