ಮಂಗಳೂರು: ಸುಳ್ಳು ಬಾಡಿಗೆ ಕರಾರು ಪತ್ರ ಮಾಡಿ 1,14,10,000 ರೂ. ಪಡೆದು ವಂಚಿಸಿರುವ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರತೀಶ್ ಬಿ.ಎನ್. ವಂಚನೆಗೆ ಒಳಗಾದವರು. ರಾಮ್ ಮೋಹನ್ ರೈ ಆರೋಪಿ.
ರತೀಶ್ ಬಿ.ಎನ್ ರವರು 2020-21 ರಲ್ಲಿ ಮಹೇಶ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು ಈ ಸಂಸ್ಥೆಯನ್ನು ಮಂಗಳೂರಿನ ಮಠದಕಣಿಯಲ್ಲಿರುವ ಗ್ಲೋಬಲ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಪ್ರ.ಲಿ ಕಟ್ಟಡದಲ್ಲಿ ತಿಂಗಳಿಗೆ 10 ಲಕ್ಷ ಬಾಡಿಗೆ ಮತ್ತು 40 ಲಕ್ಷ ಮುಂಗಡ ಠೇವಣಿ ಇಟ್ಟು ಪ್ರಾರಂಭಿಸಿದ್ದರು.
ಈ ಕಟ್ಟಡವನ್ನು ರಾಮ್ ಮೋಹನ್ ರೈ 2021 ಸೆಪ್ಟೆಂಬರ್‌ನಲ್ಲಿ ಬಾಡಿಗೆ ಕರಾರಿನಂತೆ 30 ವರ್ಷಗಳಿಗೆ ಬಾಡಿಗೆಗೆ ಕೊಟ್ಟಿದ್ದರು. ರಾಮ್ ಮೋಹನ್ ರೈ ಯವರು ಗುರದೇವ ಎಜುಕೇಶನ್ ಫೌಂಡೇಶನ್ ಎಂಬ ಸಂಸ್ಥೆ ನಡೆಸುತ್ತಿದ್ದು ಕಟ್ಟಡದ ಮಾಲೀಕರು ತಾನೇ ಎಂದು ನಂಬಿಸಿ, ಮೋಸ ಮತ್ತು ವಂಚನೆಗೈಯುವ ಉದ್ದೇಶದಿಂದ ಸುಳ್ಳು ಬಾಡಿಗೆ ಕರಾರು ಪತ್ರವನ್ನು ಮಾಡಿದ್ದಾರೆ. ಬಾಡಿಗೆ ಕರಾರು ಪತ್ರದಂತೆ ರಾಮ್ ಮೋಹನ್ ರೈ ರವರಿಗೆ ತಿಂಗಳಿಗ 10 ಲಕ್ಷದಂತೆ ಒಟ್ಟು 70.16 ಲಕ್ಷ ರೂಪಾಯಿ ಬಾಡಿಗೆಯ ರೂಪದಲ್ಲಿ ರತೀಶ್ ನೀಡಿದ್ದಾರೆ.
ಕಟ್ಟಡದ ಮಾಲಿಕತ್ವ ಡಾ. ಸುಶೀಲ್ ಜತ್ತಣ್ಣ ಮತ್ತು ಸುದರಾಮ್ ರೈ ರವರ ಹೆಸರಿನಲ್ಲಿ ಇದ್ದು ರಾಮ್ ಮೋಹನ್ ರೈ ರವರು ನಿಜವಾದ ಮಾಲೀಕರಲ್ಲ ಎಂದು ಗೊತ್ತಿದ್ದರೂ ಮೋಸ ಮತ್ತು ವಂಚನೆ ಗೈದು ದುರ್ಲಾಭಗೊಳಿಸುವ ಉದ್ದೇಶದಿಂದ ಸುಳ್ಳು ಬಾಡಿಗೆ ಕರಾರು ಪತ್ರ ಮಾಡಿ 40 ಲಕ್ಷ ರೂಪಾಯಿ ಮುಂಗಡ ಠೇವಣಿ ಮತ್ತು ತಿಂಗಳಿಗೆ ರೂ. 10 ಲಕ್ಷದಂತೆ ಬಾಡಿಗೆ ಹಣ ಪಡೆದು 70.16 ಲಕ್ಷ ರೂಪಾಯಿಯನ್ನು ವಂಚಿಸಿರುತ್ತಾರೆ. ಈ ರೀತಿ ರಾಮ್ ಮೋಹನ್ ರೈ ಒಟ್ಟು ರೂ. 1,14,10,000 ರೂ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ.