ಚಿಕ್ಕಮಗಳೂರು: ‘ದತ್ತ ಮಾಲೆ ಏಕೆ ಹಾಕಬಾರದು, ಸಮಯ ಬಂದರೆ ದತ್ತ ಮಾಲೆಯನ್ನೂ ಹಾಕುತ್ತೇನೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ‘ದತ್ತಮಾಲೆ ಹಾಕುವುದು ದೇವರ ಕಾರ್ಯಕ್ರಮ, ಕಾನೂನು ಬಾಹಿರ ಅಲ್ಲ. ಕಾನೂನು ಬಾಹಿರವಾದ ಯಾವುದೇ ಕೆಲಸ ಮಾಡುವುದಿಲ್ಲ. ಸಂಸ್ಕೃತಿ ಉಳಿಸಲು ಕಾನೂನಾತ್ಮವಾಗಿ ಏನು ಬೇಕಾದರೂ ಮಾಡುತ್ತೇನೆ’ ಎಂದರು. ‘ಜಾತ್ಯತೀತತೆ ಎಂದರೆ ಏನು? ಅಲ್ಲೆಲ್ಲೋ ಹೋಗಿ ಕಾಂಗ್ರೆಸ್‌ನ ಒಬ್ಬ ಮಂತ್ರಿ ಮಾತನಾಡಿದ್ದಾರಲ್ಲ, ನಮ್ಮ ಸಮಾಜದ ಖಾದರ್ ಅವರಿಗೆ ಬಿಜೆಪಿ ಶಾಸಕರು ಕೈಮುಗಿಯಬೇಕು, ಇದು ಜಾತ್ಯತೀತತೆ ಎಂದಿದ್ದಾರೆ.
ಅದು ಜಾತ್ಯಾತೀತತೆಯೇ, ಜಾತ್ಯತೀತತೆ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್‌ನವರಿಗೆ ಯಾವ ಯೋಗ್ಯತೆ ಇದೆ’ ಎಂದು ಪ್ರಶ್ನಿಸಿದರು. ‘ಅವರಿಗೆ ಅವರ ಧರ್ಮದ ಬಗ್ಗೆ ಅಷ್ಟು ಅಭಿಮಾನ ಇದ್ದರೆ, ನಮ್ಮ ಧರ್ಮಾಭಿಮಾನ ತೋರಿಸಲು ನಾನು ಭಯಪಡುವುದಿಲ್ಲ. ಅಗತ್ಯ ಬಂದರೆ ನಮ್ಮ ಸಂಸ್ಕೃತಿ ಉಳಿಸಲು ದತ್ತಮಾಲೆ ಹಾಕುತ್ತೇನೆ’ ಎಂದರು. ‘ಹಲೋ ಅಪ್ಪಾ’ ಬಗ್ಗೆ ಎರಡು ದಿನ ಬಿಟ್ಟು ಮಾತನಾಡುತ್ತೇನೆ. ಸಿದ್ದರಾಮಯ್ಯ ಮಗ ರಾಜಕೀಯ ಮಾಡಲಿ, ತೊಂದರೆ ಇಲ್ಲ. ಆಶ್ರಯ ಸಮಿತಿ ಅಧ್ಯಕ್ಷ ಕೆಡಿಪಿ ಸಭೆಗೆ ಹಾಜರಾಗಲು ಅವಕಾಶ ಇದೆಯೇ? ಜನಸಂಪರ್ಕ ಸಭೆಗೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಲು ಅಧಿಕಾರ ಇದೆಯೇ? ನಾನೂ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ನನ್ನ ಮಗನಿಗೆ ಕ್ಷೇತ್ರದ ಜವಾಬ್ದಾರಿ ಬಿಟ್ಟಿರಲಿಲ್ಲ’ ಎಂದರು. ‘ಮೂರು ವರ್ಷಗಳಿಂದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆದಿಲ್ಲ. ಸಿಇಒ ನೇತೃತ್ವದಲ್ಲಿ ಅಧಿಕಾರ ನಡೆಯುತ್ತಿದೆ. ಯಾವ ಕಂಪನಿಯಿಂದ ಎಷ್ಟು ಸಿಎಸ್‌ಆರ್ (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ಹಣ ಬಂದಿದೆ ಎಂಬ ಪಟ್ಟಿಯೇ ಇಲ್ಲ. ಈಗ ನಾನು ಕೇಳಿದ್ದೇನೆ. ಗತಿಗೆಟ್ಟ ಸರ್ಕಾರ ಇದು’ ಎಂದು ಲೇವಡಿ ಮಾಡಿದರು. ‘ನನ್ನನ್ನು ಕರೆಂಟ್ ಕಳ್ಳ ಎನ್ನುತ್ತೀರಿ, ನೀವು ದರೋಡೆ ಮಾಡಿಕೊಂಡು ಕುಳಿತಿದ್ದೀರಿ. ಕೂಲಿ ಮಾಡುವವನು ತಿಳಿಯದೆ ಮಾಡಿದ್ದಾನೆ, ನನಗೆ ಗೊತ್ತಿಲ್ಲ ಎನ್ನಬಹುದಿತ್ತು. ನಾನು ಹಾಗೆ ಹೇಳಿಲ್ಲ. ದಂಡ ಕಟ್ಟಿದ್ದೀನಿ.
ಶೋಭಾ ಅಪಾರ್ಟ್‌ಮೆಂಟ್ ಕಟ್ಟಿದ್ದಾರೆ. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕನಾಗಿದ್ದ ರಾಜೇಂದ್ರ ಚೋಳನ್ ಅದೇ ಅಪಾರ್ಟ್‌ಮೆಂಟ್‌ನಲ್ಲಿ ಇದ್ದ. ಅದಕ್ಕೆ ಆರು ತಿಂಗಳು ಕಡಿಮೆ ಬಿಲ್ ಬಂದಿದೆ. ಯಾಕೆ ಅಂತ ಕೇಳಿ’ ಎಂದು ಸವಾಲು ಹಾಕಿದರು. ‘ಅಧಿಕಾರದ ಅವಧಿ ಇನ್ನೂ ನಾಲ್ಕು ವರ್ಷ ಇದೆ. ಸರಿಪಡಿಸಿಕೊಳ್ಳಿ. ಇಲ್ಲದಿದ್ದರೆ ಬೆಲೆ ತೆರಬೇಕಾಗುತ್ತದೆ. ಗ್ಯಾರಂಟಿ ಮೂಲಕ ಬಡವರ ಬದುಕು ಸರಿಯಾಗಿದೆ ಎಂದು ಹೇಳಬಹುದು. ನಿಮ್ಮ ಜಾಹೀರಾತು ನೋಡಿದ್ದೇನೆ. ನೀವು ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಎಷ್ಟು ಕೊಲೆಗಳಾಗಿವೆ? ಮಹಿಳಾ ಅಧಿಕಾರಿ ಹತ್ಯೆಯೇ ಆಯಿತು. ಮನೆಯಿಂದ ಹೊರಗೆ ಬರಲು ಜನ ಹೆದರುತ್ತಿದ್ದಾರೆ. ಗೃಹ ಇಲಾಖೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದಕ್ಕೆ ಇದು ಉದಾಹರಣೆ’ ಎಂದರು. ‘ಟೆಂಟ್‌ನಲ್ಲಿ ನೀಲಿಚಿತ್ರ ತೋರಿಸಿದವರು ಅಧಿಕಾರದಲ್ಲಿದ್ದಾರೆ’ ‘ಸಾತನೂರಿನ ಟೆಂಟ್‌ನಲ್ಲಿ ನೀಲಿಚಿತ್ರ ತೋರಿಸಿಕೊಂಡು ಜೀವನ ನಡೆಸಿದವರನ್ನು ಜನ ಗೆಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷ ಅವರಿಗೇ ಅಧಿಕಾರ ಕೊಟ್ಟಿದೆ’ ಎಂದು ಎಚ್.ಡಿ. ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ ನಡೆಸಿದರು. ‘ಜೆಡಿಎಸ್ ಕಾರ್ಯಕರ್ತರು ಮುಖ್ಯಮಂತ್ರಿ ಮತ್ತು ಮಂತ್ರಿಗಳ ಮನೆ ಮುಂದೆ ಪೋಸ್ಟರ್‌ಗಳನ್ನು ಅಂಟಿಸಬಹುದು ಬಂದೋಬಸ್ತ್ ಮಾಡಿಕೊಳ್ಳಿ ಎಂದು ಗುಪ್ತಚರ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದು ಅವರ ಅಭಿರುಚಿಯನ್ನು ತೋರಿಸುತ್ತದೆ. ಟೆಂಟ್‌ನಲ್ಲಿ ನೀಲಿ ಚಿತ್ರ ತೋರಿಸಿಕೊಂಡು ಬಂದವರು ಈ ಸರ್ಕಾರದಲ್ಲಿ ಇದ್ದಾರೆ. ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ’ ಎಂದರು. ‘ಸಾತನೂರಿನ ಟೆಂಟ್‌ಗಳಲ್ಲಿ ಮಲೆಯಾಳಿ ಚಿತ್ರಕ್ಕೆ ನೀಲಿಚಿತ್ರದ ತುಣುಕು ಸೇರಿಸಿ ತೋರಿಸುತ್ತಿದ್ದರು. ಅದೇ ಮನಃಸ್ಥಿತಿ ಮುಂದುವರಿಸಿಕೊಂಡು ಬಂದಿದ್ದಾರೆ. ಅವರ ಜೀವನ ಸಂಸ್ಕೃತಿ ಬದುಕೇ ಅಷ್ಟು. ಏನು ಮಾಡೋದು’ ಎಂದು ಲೇವಡಿ ಮಾಡಿದರು.