ಉಡುಪಿ : ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆಯೊಂದು ನಡೆದಿತ್ತು. ಈ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಉಡುಪಿಯಲ್ಲಿ ಕೆಲ ದಿನಗಳ ಹಿಂದೆ ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಂತ ಘಟನೆ ನಡೆದಿತ್ತು.
ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಹತ್ಯೆ ಮಾಡಲಾಗಿತ್ತು. ಕೊಲೆಯಾದವರನ್ನು ಹಸೀನಾ (46 ), ಅಫ್ನಾನ್ (23 ), ಅಯ್ನಾಝ್ (21 ), ಆಸಿಂ (12 ) ಎಂದು ಗುರುತಿಸಲಾಗಿತ್ತು.
ಈ ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿದ್ದು, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳ ಸಹಿತ, ಮಾಹಿತಿ ಸಂಗ್ರಹಿಸುತ್ತಿದ್ದರು. ಏಕಾಏಕಿ ಮನೆಗೆ ನುಗ್ಗಿ ಮಾತಿನ ಚಕಮಕಿ ನಡೆದ ಬಳಿಕ ಮೊದಲು ಮಹಿಳೆ ಹಾಗೂ ಮಕ್ಕಳಾದ ಹಸಿನಾ, ಅಫ್ನಾನ್, ಐನಾಜ್ ಗೆ ಇರಿದ ದುಷ್ಕರ್ಮಿ, ಬಳಿಕ ಅಲ್ಲೇ ಆಟವಾಡುತ್ತಿದ್ದ ಆಸೀಮ್ ಸದ್ದು ಕೇಳಿ ಒಳ ಬರುತ್ತಿದ್ದಂತೆ ಆತನನ್ನು ಕೂಡ ದುಷ್ಕರ್ಮಿ ಇರಿದುಕೊಂದಿದ್ದಾನೆ ಎನ್ನಲಾಗಿತ್ತು.
ಬೊಬ್ಬೆ ಕೇಳಿ ಹೊರಗಡೆ ಬಂದ ಪಕ್ಕದ ಮನೆ ಯುವತಿಯನ್ನು ಬೆದರಿಸಿ ದುಷ್ಕರ್ಮಿ ಅಲ್ಲಿಂದ ಕಾಲ್ಕಿತ್ತಿದ್ದನು. ಇನ್ನು ಜೀವಾಂತ್ಯಗೊಳಿಸಿದ ಮಹಿಳೆಯ ಅತ್ತೆಗೂ ತೀವ್ರ ತರಹದ ಗಾಯಗಳಾಗಿದ್ದವು. ಈ ಘಟನೆಯ ಕುರಿತಂತೆ ತನಿಖೆಗೆ ಇಳಿದಂತ ಪೊಲೀಸರು, ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಆರೋಪಿ ಪ್ರವೀಣ್ ಅರುಣ್ ಚೌಗಲೆ ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮಂಗಳೂರು ಏರ್ ಪೋರ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದನು. ಸಿಆರ್ ಪಿಎಫ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಪ್ರವೀಣ್, ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಚಾಕುವಿನಿಂದ ಇರಿದು ಪರಾರಿಯಾಗಿದ್ದನು. ಈಗ ಆತನನ್ನ ಬಂಧಿಸಿದ್ದು, ಉಡುಪಿಗೆ ಕರೆತರಲಾಗುತ್ತಿದೆ.