ಬಂಟ್ವಾಳ: ಗಂಡನ ಮನೆಯಲ್ಲಿನ ವರದಕ್ಷಿಣೆ ಕಿರುಕುಳ ತಾಳಲಾರದೆ ಮಾನಸಿಕವಾಗಿ ನೊಂದಿದ್ದ ನವ ವಿವಾಹಿತೆಯೋರ್ವಳು ತಾಯಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸಜೀಪ ಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ನೌಸೀನ್ (22 ವ) ಮೃತಪಟ್ಟ ಮಹಿಳೆ. ನೌಸೀನ್ ಅವರು ಉಳ್ಳಾಲದ ಆಜ್ಮಾನ್ ಜೊತೆ ಮೂರು ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಪ್ರೇಮವಿವಾಹ ಆದರೂ ಕೂಡ ವಿವಾಹ ಸಂದರ್ಭದಲ್ಲಿ 18 ಪವನ್ ಚಿನ್ನವನ್ನು ಉಡುಗೂರೆಯಾಗಿ ನೀಡಲಾಗಿತ್ತು. ಆದರೆ ಹುಡುಗಿ ಕಡೆಯವರು ನೀಡಿದ ವರದಕ್ಷಿಣೆ ಕಡಿಮೆಯಾಗಿದೆ, ಲವ್ ಮಾಡಿ ಮದುವೆಯಾದರಿಂದ ಒಳ್ಳೆ ಹುಡುಗಿ ಸಿಗಲಿಲ್ಲ, ಇಲ್ಲದಿದ್ದರೆ ಒಳ್ಳೆಯ ಹುಡುಗಿ ಸಿಗಬಹುದಿತ್ತು ಎಂದು ಅತ್ತೆ, ಮಗಳು ಅಜ್ಮೀಯಾ ಮತ್ತು ಗಂಡ ಸೇರಿಕೊಂಡು ಹೀಯಾಳಿಸಿದ್ದಲ್ಲದೆ, ಮಾನಸಿಕ ಕಿರುಕುಳ ಕೊಡುತ್ತಿದ್ದರು. ಈ ಕಾರಣಕ್ಕಾಗಿ ನೌಸೀನ್ ಉಳ್ಳಾಲದ ಗಂಡನ ಮನೆಯಿಂದ ಸಜೀಪ ತಾಯಿ ಮನೆಗೆ ಬಂದಿದ್ದಳು. ಮಾನಸಿಕವಾಗಿ ನೊಂದಿದ್ದ ನೌಸೀನ್ ಆ.25 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಾವಿನ ಬಗ್ಗೆ ಸೂಕ್ತವಾದ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ನಾಸೀರ್ ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.