ಕಿನ್ನಿಗೋಳಿ: ಕಿನ್ನಿಗೋಳಿ – ಮೂಡುಬಿದಿರೆ ರಾಜ್ಯ ಹೆದ್ದಾರಿಯ ಮೂರುಕಾವೇರಿಯಲ್ಲಿ ಟಿಪ್ಪರ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಆರು ಮಂದಿಯಲ್ಲಿ ಓರ್ವರು ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ. ಬೆಳುವಾಯಿ ನಿವಾಸಿ ರಾಮಣ್ಣ (49) ಮೃತರು. ಕಾರಿನಲ್ಲಿ ರಾಮಣ್ಣ ಅವರ ಜತೆ ವಸಂತ, ಪ್ರವೀಣ್, ದಿನೇಶ್, ಆನಂದ, ಸಂಜೀವ ಅವರು ಇದ್ದರು. ಕಾರಿನಲ್ಲಿದ್ದವರ ಪೈಕಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ನಾಲ್ವರು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಐಕಳ ಕಡೆಯಿಂದ ಮೂಲ್ಕಿ ಕಡೆ ಸಂಚರಿಸುತ್ತಿದ್ದ ಟಿಪ್ಪರ್‌ಗೆ, ಮೂಲ್ಕಿಯಿಂದ ಬೆಳುವಾಯಿ ಕಡೆಗೆ ಸಂಚರಿಸುತ್ತಿದ್ದ ಕಾರು ಮೂರುಕಾವೇರಿ ಸಮೀಪದಲ್ಲಿ ಢಿಕ್ಕಿ ಹೊಡೆದಿತ್ತು. ಕಾರು ಸಂಚರಿಸುವ ಸಂದರ್ಭ ರಸ್ತೆಯ ಅಂಚಿನಿಂದ ಕೆಳಗೆ ಇಳಿದಿದ್ದು, ಅಂಚಿನಿಂದ ಮೇಲೆ ಬರುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ, ಮುಂಭಾಗದಿಂದ ಬರುತ್ತಿದ್ದ ಟಿಪ್ಪರ್‌ಗೆ ಢಿಕ್ಕಿ ಹೊಡೆದಿದೆ. ಕಾರು ಸಂಪೂರ್ಣವಾಗಿ ಬಲ ಬದಿಗೆ ಸರಿದಿದ್ದು, ಅಪಘಾತ ತಪ್ಪಿಸಲು ಟಿಪ್ಪರ್ ಎಡಭಾಗಕ್ಕೆ ಸಂಚರಿಸಿದರೂ ಅಪಘಾತ ತಡೆಯಲು ಸಾಧ್ಯವಾಗಿಲ್ಲ. ಅಪಘಾತದ ತೀವ್ರತೆಗೆ ಕಾರಿನ ಒಂದು ಪಾರ್ಶ್ವ ಸಂಪೂರ್ಣ ನಜ್ಜುಗುಜ್ಜಾಗಿದೆ. ಟಿಪ್ಪರಿಗೂ ಹಾನಿಯಾಗಿದೆ. ಮೃತ ರಾಮಣ್ಣ ಮತ್ತು ಐವರು ಮೂಲ್ಕಿ ಕಾರ್ನಾಡಿನಲ್ಲಿ ಹಳೆಯ ಮನೆಯನ್ನು ಕೆಡವುವ ಕೆಲಸವನ್ನು ಮಾಡಿ ಸಂಜೆ ತಮ್ಮ ಮನೆ ಬೆಳವಾಯಿಗೆ ವಾಪಸಾಗುವ ಸಂದರ್ಭ ಅಪಘಾತ ಸಂಭವಿಸಿದೆ. ದಾರಿಯಲ್ಲಿ ರೈಲ್ವೇ ಗೇಟ್ ತಡೆ ಗಾಯಾಳುವನ್ನು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಹಳೆ ಯಂಗಡಿಯ ಬಳಿಯ ರೈಲ್ವೇ ಗೇಟ್ ಹಾಕಿದ್ದರಿಂದಸುಮಾರು 20 ನಿಮಿಷ ತಡವಾಗಿ ಆಸ್ಪತ್ರೆಗೆ ಸಾಗಿಸುವಂತಾಗಿದೆ. ತುರ್ತು ಸಂದರ್ಭಗಳಿಗಾಗಿಯೇ ಇಲ್ಲಿನ ಮುಖ್ಯರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡುವ ಅನಿವಾರ್ಯತೆ ಇದೆ ಎಂದು ಸಾರ್ವಜನಿಕರು ಹೇಳಿದ್ದಾರೆ.