ಪುಣೆ : ವೃತ್ತಿಯಲ್ಲಿ ವೈದ್ಯನಾಗಿದ್ದ ಹಾಗೂ ತನ್ನ ವೃತ್ತಿಯೊಂದಿಗೆ ಹೆಸರಾಗಿದ್ದ ಅದ್ನಾನ್ ಅಲಿ ಸರ್ಕಾರ್ (43) ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೇರಣೆ ನೀಡಿದ್ದು ದೇಶಾದ್ಯಂತ ಅಚ್ಚರಿಗೆ ಕಾರಣವಾಗಿದೆ. ಐಸಿಸ್ ಜಾಲದಲ್ಲಿ ಸೆರೆಯಾಗಿರುವ ವ್ಯಕ್ತಿ ಸಾಮಾನ್ಯನಲ್ಲ. ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ಚಿನ್ನದ ಪದಕ ಪಡೆದುಕೊಂಡಿರುವ ಖ್ಯಾತ ಎಂಬಿಬಿಎಸ್ ವೈದ್ಯ ಹಾಗೂ ವಿಶೇಷ ಅರವಳಿಕೆ ತಜ್ಞ. ಇಂಗ್ಲಿಷ್, ಮರಾಠಿ, ಹಿಂದಿ ಮತ್ತು ಜರ್ಮನ್ ಭಾಷೆಗಳನ್ನು ಮಾತನಾಡಬಲ್ಲ ನಿಪುಣ. ಮೇಲಾಗಿ ವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದ ಸುಮಾರು 18 ಪುಸ್ತಕಗಳನ್ನು ಸಹ ಲೇಖಕನಾಗಿ ಬರೆದಿರುವ ತಜ್ಞ ಈಗ ಎನ್ಐಎ ಅತಿಥಿಯಾಗಿದ್ದಾನೆ. ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್ನ ಶಂಕಿತ ಭಯೋತ್ಪಾದಕರೊಂದಿಗೆ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ್ದ ಹಾಗೂ ಐಸಿಸ್ನ ಹಿಂಸಾತ್ಮಕ ಉಗ್ರ ಕೃತ್ಯಗಳನ್ನು ಉತ್ತೇಜಿಸುತ್ತಿದ್ದ ಆರೋಪದ ಮೇಲೆ ಚಿನ್ನದ ಪದಕ ಪುರಸ್ಕೃತ ವೈದ್ಯನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ. ಜುಲೈ 3 ರಂದು ಮುಂಬೈ, ಥಾಣೆ ಮತ್ತು ಪುಣೆಯಲ್ಲಿ ಏಕಕಾಲದಲ್ಲಿ ನಡೆಸಿದ ದಾಳಿಯಲ್ಲಿ ಎನ್ಐಎ ನಾಲ್ವರು ಆರೋಪಿಗಳನ್ನು ಬಂಧಿಸಿತ್ತು. ಅದೇ ಪ್ರಕರಣದಲ್ಲಿ ವೈದ್ಯ ಅದ್ನಾನ್ನನ್ನು ಬಂಧಿಸಲಾಗಿದೆ. ಈ ಎಲ್ಲ ಆರೋಪಿಗಳು ಐಸಿಸ್ನ ಭಯೋತ್ಪಾದಕ ಚಟುವಟಿಕೆಗೆ ಸಂಚು ರೂಪಿಸಿದ್ದರು ಎಂಬ ಭಯಾನಕ ಅಂಶ ಬೆಳಕಿಗೆ ಬಂದಿದೆ. ಕೊಂಡ್ವಾದಲ್ಲಿರುವ ಬಂಧಿತ ವೈದ್ಯನ ಮನೆಯಲ್ಲಿ ಶೋಧ ನಡೆಸಿದಾಗ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು, ಐಸಿಸ್ಗೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ ಹಲವಾರು ದೋಷಾರೋಪಣೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ತಿಳಿಸಿದೆ.
ವೈದ್ಯನಿಗೆ ಐಸಿಎಸ್ನೊಂದಿಗೆ ನಂಟು: 18 ಪುಸ್ತಕಗಳ ಲೇಖಕ ಅರೆಸ್ಟ್
Arrest is the author of 18 books