ಬೆಂಗಳೂರು: ಜುಲೈ.19ರಿಂದ ರಾಜ್ಯಾಧ್ಯಂತ ಗೃಹಲಕ್ಷ್ಮಿ ಯೋಜನೆಗೆ ಜಾಲನೆ ನೀಡಲಾಗಿದೆ. ಜುಲೈ.20ರಿಂದ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಕೂಡ ಆರಂಭಗೊಂಡಿದೆ. ಆದ್ರೇ ಈ ಯೋಜನೆಯ ಅಡಿಯಲ್ಲಿ ಮನೆಯ ಕುಟುಂಬದ ಯಜಮಾನಿ ಮಹಿಳೆಯರು ಪ್ರಯೋಜನ ಪಡೆಯಲು ರೇಷನ್ ಕಾರ್ಡಿನಲ್ಲಿ ಮಹಿಳೆಯರ ಹೆಸರು ಯಜಮಾನಿ ಎಂಬುದಾಗಿ ದಾಖಲಾಗಿರಬೇಕಿದೆ.
ಹಾಗಾದ್ರೇ ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಮಹಿಳೆ ಎಂಬುದಾಗಿ ಸೇರಿಸಲು ಏನು ಮಾಡಬೇಕು ಅಂತ ಮುಂದೆ ಓದಿ.
ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ 2000 ರೂ ಪ್ರತಿ ತಿಂಗಳು ಕುಟುಂಬದ ಯಜಮಾನಿ ಮಹಿಳೆಯರು ಪಡೆಯಲು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರಾಗಿ ಆ ಮಹಿಳೆಯ ಹೆಸರು ನಮೂದಾಗಿರಬೇಕು. ಒಂದು ವೇಳೆ ಕುಟುಂಬದ ಮುಖ್ಯಸ್ಥರು ಪುರುಷರಾಗಿದ್ದರೇ, ಗೃಹಲಕ್ಷ್ಮಿ ಯೋಜನೆಯ ಲಾಭ ಸಿಗೋದಿಲ್ಲ.
ಈ ಹಿನ್ನಲೆಯಲ್ಲಿ ರಾಜ್ಯದ ಅನೇಕ ಪರಿತರದಾರರು ತಮ್ಮ ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿ ಎಂಬುದಾಗಿ ಮಹಿಳೆಯ ಹೆಸರನ್ನು ಹೇಗೆ ಸೇರಿಸಬೇಕು ಎನ್ನುವ ಗೊಂದಲ್ಲಿ ಇದ್ದರೇ, ನೀವು ಈ ಕೆಳಕಂಡ ವಿಧಾನದ ಮೂಲಕ, ಕುಟುಂಬದ ಮುಖ್ಯಸ್ಥರು ಮಹಿಳೆ ಎಂಬುದಾಗಿ ಹೆಸರನ್ನು ಬದಲಾವಣೆ ಮಾಡಬಹುದಾಗಿದೆ.
ಪಡಿತರ ಚೀಟಿಯಲ್ಲಿ ಯಜಮಾನಿಯ ಹೆಸರು ಬದಲಾವಣೆ ಮಾಡಲು ಹೀಗೆ ಮಾಡಿ.
- ಪಡಿತರ ಚೀಟಿಯೊಂದಿಗೆ ಸಂಬಂಧ ಪಟ್ಟ ಕುಟುಂಬದ ಮಹಿಳೆಯರು ಸಮೀಪದ ಸೇವಾ ಕೇಂದ್ರಗಳಿಗೆ ಭೇಟಿ ನೀಡಬೇಕು.
- ರೇಷನ್ ಕಾರ್ಡಿನಲ್ಲಿ ಕುಟುಂಬದ ಯಜಮಾನಿ ಮಹಿಳೆ ಎಂಬುದಾಗಿ ಬದಲಾಯಿಸಲು ಮೊದಲು ಒಂದು ಅರ್ಜಿಯನ್ನು ಸೂಕ್ತ ನಮೂನೆಯಲ್ಲಿ ನೀಡಬೇಕು.
- ಅರ್ಜಿಯ ಜೊತೆಗೆ ಅದಕ್ಕೆ ಸಂಬಂಧಿಸಿದಂತ ಸೂಕ್ತ ದಾಖಲೆ ನೀಡಬೇಕು.
- ಈ ಬಳಿಕ ದೃಢೀಕರಿಸಲು ಬಯೋಮೆಟ್ರಿಕ್ ಮೂಲಕ ದಾಖಲಿಸಬೇಕು.
- ಹೀಗೆ ಮಾಡಿದಾಗ ನಿಮ್ಮ ಪಡಿತರ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರು ಯಜಮಾನಿ ಎಂಬುದಾಗಿ ಬದಲಾಯಿಸಲು ಆನ್ ಲೈನ್ ನಲ್ಲಿ ಅಪ್ ಡೇಟ್ ಆಗಲಿದೆ.
- ಸೇವಾ ಕೇಂದ್ರದಿಂದ ತಿದ್ದುಪಡಿಗೆ ಸಂಬಂಧಿಸಿದಂತೆ ಸ್ವೀಕೃತಿಯ ಪ್ರತಿಯನ್ನು ಪಡೆಯೋದು ಮರೆಯಬೇಡಿ.
- ಹೀಗೆ ಬದಲಾವಣೆಗೆ ಕೊಟ್ಟು ಬಂದ ಬಳಿಕ ಒಂದು ವಾರದ ನಂತ್ರ ನಿಮ್ಮ ಮೊಬೈಲ್ ಸಂಖ್ಯೆಗೆ ಆಹಾರ ಇಲಾಖೆಯಿಂದ ಎಸ್ ಎಂ ಎಸ್ ಮೂಲಕ ಹೆಸರು ಬದಲಾವಣೆಯ ಸಂದೇಶ ಬರಲಿದೆ.
- ತಿದ್ದುಪಡಿಯಾದ ಸಂದೇಶ ಬಂದ ನಂತ್ರ, ನಿಮ್ಮ ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರು ಮಹಿಳೆ ಎಂಬುದಾಗಿ ಬದಲಾಗಲಿದೆ. ಆ ಬಳಿಕ ಅದನ್ನು ಪ್ರಿಂಟ್ ತೆಗೆದುಕೊಳ್ಳಿ.
ಆನ್ ಲೈನ್ ಮೂಲಕ ತಿದ್ದುಪಡಿಗಾಗಿ ಸಲ್ಲಿಸಲು ಹೀಗೆ ಮಾಡಿ.
- ನೀವು ಆನ್ ಲೈನ್ ಮೂಲಕ ಗೃಹಲಕ್ಷ್ಮೀ ಯೋಜನೆಯ ಸೌಲಭ್ಯ ಪಡೆಯಲು ಕುಟುಂಬದ ಯಜಮಾನಿ ಮಹಿಳೆ ಎಂಬುದಾಗಿ ಬದಲಾವಣೆ ಮಾಡಲುahara.kar.nic.inಜಾಲತಾಣಕ್ಕೆ ಭೇಟಿ ನೀಡಿ.
- ಈ ಪುಟ ತೆರೆದ ಬಳಿಕ ಇ-ಸೇವೆಗಳ ಹತ್ತಿರ ಕ್ಲಿಕ್ ಮಾಡಿ.
- ಇಲ್ಲಿ ಸಿಗುವಂತ ಹೊಸ ಸೇರ್ಪಡೆ, ತಿದ್ದುಪಡಿ ಎಂಬಲ್ಲಿ ಕ್ಲಿಕ್ ಮಾಡಿ
- ಆಗ ಹೊಸ ಪುಟ ತೆರೆದುಕೊಳ್ಳಲಿದೆ. ಆಗ ಅಲ್ಲಿ ತಿದ್ದುಪಡಿ ಫಾರ್ಮ್ ಭರ್ತಿ ಮಾಡಿ.
- ಆಗ ಕೇಳುವಂತ ಸೂಕ್ತ ದಾಖಲೆ ಅಪ್ ಲೋಡ್ ಮಾಡಿ.
- ಈ ಬಳಿಕ ಎಲ್ಲವನ್ನು ಪರಿಶೀಲಿಸಿ, ಕುಟುಂಬದ ಯಜಮಾನಿ ಮಹಿಳೆ ಎಂಬುದಾಗಿ ತಿದ್ದುಪಡಿ ಮಾಡಲು ಸಬ್ ಮಿಟ್ ಬಟನ್ ಕ್ಲಿಕ್ ಮಾಡಿ. ಆಗ ನೋಂದಾವಣೆಯಾಗಿ, ತಿದ್ದುಪಡಿಯಾಗಲಿದೆ.