ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಖಾಸಗಿ ಸಾರಿಗೆ ಸಂಸ್ಥೆಗಳು ಸಿಡಿದೆದ್ದಿವೆ. ಮಹಿಳೆಯರಿಗೆ ಉಚಿತ ಪ್ರಯಾಣದ ರಾಜ್ಯ ಸರ್ಕಾರದ ‘ಶಕ್ತಿ ಯೋಜನೆ’ ವಿರುದ್ಧ ಕರ್ನಾಟಕ ಖಾಸಗಿ ಸಾರಿಗೆ ಸಂಘಟನೆಗಳು ಸಿಡಿದೆದ್ದಿದ್ದು, ಜುಲೈ 27 ರಂದು ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಿದೆ. ಇದರಿಂದಾಗಿ ಜು.26ರ ಮಧ್ಯರಾತ್ರಿ 12 ರಿಂದ 27ರ ಮಧ್ಯರಾತ್ರಿಯ ವರೆಗೂ ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್‌ಗಳು ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ.
ರಾಜ್ಯದ 23 ಸಾರಿಗೆ ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ. ಜುಲೈ 27ರಂದು ಬೆಳಿಗ್ಗೆ 11 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಜಾಥಾ ನಡೆಸುವ ಮೂಲಕ ಸರ್ಕಾರ ಗಮನ ಸೆಳೆಯಲು ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ನಿರ್ಧರಿಸಿದೆ.
ರಾಜ್ಯ ಸರ್ಕಾರದ ಕೆಲವು ನೀತಿಗಳಿಂದ ಖಾಸಗಿ ಸಾರಿಗೆಗೆ ನಷ್ಟವಾಗುತ್ತಿದೆ. ಶಕ್ತಿ ಯೋಜನೆ, ವೈಟ್ ಬೋರ್ಡ್ ವಾಹನವನ್ನು ವಾಣಿಜ್ಯ ವಾಹನವಾಗಿ ಉಪಯೋಗಿಸುತ್ತಿರುವುದು, ದ್ವಿಚಕ್ರ ವಾಹನಗಳಿಗೆ ಮುಕ್ತ ಪರವಾನಿಗೆ ನೀಡುತ್ತಿರುವುದು ಸೇರಿದಂತೆ ಹಲವು ಯೋಜನೆಗಳಿಂದ ಖಾಸಗಿ ಸಾರಿಗೆ ನೆಲ ಕಚ್ಚಿ ಹೋಗಿದೆ ಎಂದು ಖಾಸಗಿ ಸಾರಿಗೆ ಮಾಲೀಕರು ಆರೋಪಿಸಿದ್ದಾರೆ.