ಮಂಗಳೂರು: ನಗರದ ನೆಹರೂ ಮೈದಾನದ ಬಳಿಯಿರುವ ಫುಟ್ ಬಾಲ್ ಮೈದಾನದಲ್ಲಿ ಕಬಡ್ಡಿ ಹಾಗೂ ಕುಸ್ತಿ ಆಟಕ್ಕೂ ಸ್ಥಳ ಮೀಸರಿಸಬೇಕೆಂಬ ಮನಪಾ ಆಡಳಿತದ ನಿರ್ಣಯಕ್ಕೆ ವಿಪಕ್ಷ ಸದಸ್ಯರು ವಿರೋಧಿಸಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಪ್ರಹಸನ ಮಂಗಳೂರು ಮನಪಾ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಮೇಯರ್ ಜಯಾನಂದ ಅಂಚನ್ ನಿರ್ಣಯ ಮಂಡಿಸುತ್ತಿರುವಂತೆ ವಿಪಕ್ಷ ಸದಸ್ಯ ಲತೀಫ್ ಕಂದಕ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಎಲ್ಲಾ ವಿಪಕ್ಷ ಸದಸ್ಯರು ದನಿಗೂಡಿಸಿ ಸದನದ ಬಾವಿಗಿಳಿದು ಮೇಯರ್ ಎದುರು ಈ ನಿರ್ಣಯ ಮಂಡಿಸದಿರುವಂತೆ ಪ್ರತಿಭಟನೆ ನಡೆಸಿದರು. ಈ ಸ್ಥಳ ಫುಟ್ಬಾಲ್ ಆಟಕ್ಕೇ ಮೀಸಲಿರಿಸಬೇಕು. ಇಲ್ಲದಿದ್ದಲ್ಲಿ ಈ ನಿರ್ಣಯ ಮಂಡನೆಯಾದಲ್ಲಿ ಹೈಕೋರ್ಟ್ ಆದೇಶದ ಉಲ್ಲಂಘನೆ ಆಗಲಿದೆ. ಇದಕ್ಕೆ ಮಣಿದ ಮೇಯರ್ ಈ ನಿರ್ಣಯವನ್ನು ವಾರದ ಕಾಲ ಮುಂದೂಡಿ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಮನಪಾ ಸದಸ್ಯರ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಘೋಷಿಸಿದರು. ನಗರದ ಅನೇಕ ಕಡೆಗಳಲ್ಲಿ ಯುಜಿಡಿ ಬ್ಲಾಕ್ ಆಗಿ ತ್ಯಾಜ್ಯ ರಸ್ತೆಯಲ್ಲಿ ಹರಿಯುತ್ತಿರುವುದನ್ನು ಸರಿಪಡಿಸುವಂತೆ ವಿಪಕ್ಷ ಸದಸ್ಯ ನವೀನ್ ಡಿಸೋಜ ಹೇಳಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರೂ ದನಿಗೂಡಿಸಿ ಬಹಳಷ್ಟು ವಾರ್ಡ್ ಗಳಲ್ಲಿ ಇಂತಹ ಸಮಸ್ಯೆಗಳಿದ್ದು, ಇದಕ್ಕೆ ಶೀಘ್ರ ಪರಿಹಾರ ಒದಗಿಸುವಂತೆ ಆಗ್ರಹಿಸಿದರು. ಮನಪಾ ಆಯುಕ್ತ ಎಲ್.ಸಿ. ಆನಂದ ಪ್ರತಿಕ್ರಿಯಿಸಿ, ವಾರದೊಳಗೆ ಎಲ್ಲೆಲ್ಲಿ ವೆಟ್ ವೆಲ್ ಲಿಂಕ್ ತಪ್ಪಿದೆ ಎಂದು ಪರಿಶೀಲಿಸಿ, ಸದಸ್ಯರೊಂದಿಗೆ ಚರ್ಚಿಸಲಾಗುತ್ತದೆ ಎಂದರು. ಆ್ಯಂಟನಿ ವೇಸ್ಟ್ ಸಂಸ್ಥೆಗೆ ಮಂಗಳೂರು ಮನಪಾ 16 ಕೋಟಿ ರೂ. ದಂಡ ವಿಧಿಸಿದೆ. ಆದರೆ, ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದರಿಂದ ಆರ್ಬಿಟ್ರೇಷನ್ ಗೆ ವಾದ ಮಾಡಲು ಹೈಕೋರ್ಟ್ ವಕೀಲರು ಮಂಗಳೂರಿಗೆ ಬರಬೇಕು ಎಂಬ ಆಡಳಿತ ಪಕ್ಷದ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ಸದಸ್ಯ ಎ.ಸಿ.ವಿನಯ್ ರಾಜ್, ಇದಕ್ಕೆ ವಾದಿಸಲು ಹೈಕೋರ್ಟ್ ವಕೀಲರೇ ಯಾಕೆ ಬರಬೇಕು? ಇದರ ಹಿಂದೆ ಯಾವ ಹುನ್ನಾರ ಅಡಗಿದೆ ಎಂದ ಅವರು, ಇದೇ ರೀತಿ ವಕಾಲತ್ತು ಮಾಡಿಸಿದರೆ ಪಾಲಿಕೆ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗಲಿದೆ ಎಂದರು.