ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ 13ನೇ ಜಾಗತಿಕ ಟಿ20 ಪ್ರಶಸ್ತಿ

Prakhara News
1 Min Read

ಮುಂಬೈ: ಎಂಐ ನ್ಯೂಯಾರ್ಕ್ ತಂಡ 2025ರ ಮೇಜರ್ ಲೀಗ್ ಕ್ರಿಕೆಟ್ (ಎಂಎಲ್ಸಿ) ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಮೂಲಕ ಅಮೆರಿಕದ ಪ್ರಮುಖ ಟಿ20 ಟೂರ್ನಿಯ ಕೇವಲ ಮೂರು ಆವೃತ್ತಿಗಳಲ್ಲಿ ಎರಡನೇ ಬಾರಿ ಚಾಂಪಿಯನ್ ಪಟ್ಟವೇರಿದ ಸಾಧನೆ ಮಾಡಿದೆ. ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಗೆ ಜಾಗತಿಕವಾಗಿ ಒಲಿದ 13ನೇ ಪ್ರಮುಖ ಟಿ20 ಪ್ರಶಸ್ತಿ ಇದಾಗಿದೆ ಮತ್ತು 2025ರಲ್ಲಿ ಗೆದ್ದ ಮೂರನೇ ಟ್ರೋಫಿಯಾಗಿದೆ.

ಎಂಐ ನ್ಯೂಯಾರ್ಕ್ ತಂಡ ಭಾನುವಾರ ರಾತ್ರಿ ಡಲ್ಲಾಸ್ನಲ್ಲಿ ನಡೆದ ಫೈನಲ್‌ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮರುಸ್ಥಾಪಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಎಂಐ ನ್ಯೂಯಾರ್ಕ್ ತಂಡ ಕ್ವಿಂಟನ್ ಡಿಕಾಕ್ (77 ರನ್, 46 ಎಸೆತ, 6 ಬೌಂಡರಿ, 4 ಸಿಕ್ಸರ್) ಬಿರುಸಿನ ಅರ್ಧಶತಕದಾಟದಿಂದ 7 ವಿಕೆಟ್ಗೆ 180 ರನ್ ಕಲೆಹಾಕಿತು. ಪ್ರತಿಯಾಗಿ ವಾಷಿಂಗ್ಟನ್ ಫ್ರೀಡಂ ಪರ ರಚಿನ್ ರವೀಂದ್ರ (70) ಮತ್ತು ಗ್ಲೆನ್ ಫಿಲಿಪ್ಸ್ (48*) ಹೋರಾಟ ನಡೆಸಿದರು. ಆದರೆ ಕೊನೇ ಓವರ್ನಲ್ಲಿ ವಾಷಿಂಗ್ಟನ್ಗೆ 12 ರನ್ ಬೇಕಿದ್ದಾಗ ಯುವ ಮಧ್ಯಮ ವೇಗಿ ರುಶಿಲ್ ಉಗರ್ಕರ್ 6 ರನ್ ಮಾತ್ರ ಬಿಟ್ಟುಕೊಟ್ಟು 1 ವಿಕೆಟ್ ಕಬಳಿಸಿದರು. ಇದರಿಂದ ವಾಷಿಂಗ್ಟನ್ ಫ್ರೀಡಂ 5 ವಿಕೆಟ್ಗೆ 175 ರನ್ ಗಳಿಸಲಷ್ಟೇ ಶಕ್ತಗೊಂಡರೆ, ಎಂಐ ನ್ಯೂಯಾರ್ಕ್ ತಂಡ 5 ರನ್ಗಳಿಂದ ರೋಚಕ ಗೆಲುವು ದಾಖಲಿಸಿತು. ಟೂರ್ನಿಯ ಆರಂಭಿಕ 7 ಪಂದ್ಯಗಳಲ್ಲಿ 6ರಲ್ಲಿ ಸೋತಿದ್ದ ಎಂಐ ನ್ಯೂಯಾರ್ಕ್ ತಂಡ ನಂತರದಲ್ಲಿ ಪುಟಿದೆದ್ದಿತ್ತು. 4ನೇ ಸ್ಥಾನಿಯಾಗಿ ಪ್ಲೇಆಫ್ ಪ್ರವೇಶಿಸಿದ್ದ ನಿಕೋಲಸ್ ಪೂರನ್ ನಾಯಕತ್ವದ ಎಂಐ ನ್ಯೂಯಾರ್ಕ್, ಸತತ 3 ಜಯದೊಂದಿಗೆ ಪ್ರಶಸ್ತಿಗೆ ಮುತ್ತಿಕ್ಕಿರುವುದು ವಿಶೇಷವಾಗಿದೆ.

Share This Article
Leave a Comment