ಪೊಳಲಿ ದೇವಸ್ಥಾನಕ್ಕೆ ವಿಹೆಚ್‌ಪಿ–ಬಜರಂಗದಳ ಪಾದಯಾತ್ರೆ : ವಸ್ತ್ರಸಂಹಿತೆ ಜಾರಿಗೆ ಆಗ್ರಹ.

Prakhara News
1 Min Read

ಬಂಟ್ವಾಳ : ಬಂಟ್ವಾಳ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಹಾಗೂ ಬಜರಂಗದಳ ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ 7ನೇ ವರ್ಷದ ಪಾದಯಾತ್ರೆ ಭಾನುವಾರ ಭಕ್ತಿಭಾವದಿಂದ ನಡೆಯಿತು.

ಬೆಳಿಗ್ಗೆ 5 ಗಂಟೆಗೆ ಕೈಕಂಬ–ಪೊಳಲಿ ದ್ವಾರದಿಂದ ಪ್ರಾರಂಭವಾದ ಪಾದಯಾತ್ರೆ ಸುಮಾರು 8:30ಕ್ಕೆ ದೇವಸ್ಥಾನ ತಲುಪಿತು. ಈ ಪಾದಯಾತ್ರೆಯಲ್ಲಿ ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದು, ಧಾರ್ಮಿಕ ಉತ್ಸಾಹದ ವಾತಾವರಣ ನಿರ್ಮಾಣವಾಯಿತು. ಪೊಳಲಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿ, ಗೋಶಾಲೆ ನಿರ್ಮಾಣ ಹಾಗೂ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋಶಾಲೆ ನಿರ್ಮಾಣಕ್ಕೆ ಅನುಮೋದನೆ ದೊರಕಿದ್ದರೂ, ಅದು ಇನ್ನೂ ಸಂಪೂರ್ಣವಾಗಿ ಜಾರಿಯಾಗಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಇದೇ ರೀತಿ, ವಸ್ತ್ರಸಂಹಿತೆ ಜಾರಿಗೆ ಕಳೆದ ಏಳು ವರ್ಷಗಳಿಂದ ಪಾದಯಾತ್ರೆಯ ಮೂಲಕ ಮನವಿ ಸಲ್ಲಿಸಲಾಗುತ್ತಿದೆಯಾದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಈ ಬಾರಿಯಾದರೂ ಪೊಳಲಿ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಸ್ತ್ರಸಂಹಿತೆ ಜಾರಿಗೊಳಿಸಬೇಕೆಂದು ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೂ ಮುನ್ನವೂ ವಿಹೆಚ್‌ಪಿ ಮತ್ತು ಬಜರಂಗದಳ ಪಾದಯಾತ್ರೆಯ ಮೂಲಕ ದೇವಸ್ಥಾನಕ್ಕೆ ಸಂಬಂಧಿಸಿದ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದು, ಕೆಲವು ಇನ್ನೂ ಬಾಕಿ ಉಳಿದಿವೆ. ಇಂದಿನ ಸರ್ಕಾರ ಈ ಬೇಡಿಕೆಗಳನ್ನು ಈಡೇರಿಸುವತ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಮುಖಂಡರು ಆಗ್ರಹಿಸಿದ್ದಾರೆ.

Share This Article
Leave a Comment