ಸುರತ್ಕಲ್: ಭಾರಿ ಮಳೆಯಿಂದಾಗಿ ಹೊಂಡಗುಂಡಿ ಬಿದ್ದಿರುವ ಸುರತ್ಕಲ್-ನಂತೂರು ನಡುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತುರ್ತು ದುರಸ್ತಿ ಕಾಮಗಾರಿ ಆರಂಭಗೊಂಡಿದೆ.


ಅಧಿಕೃತವಾಗಿ ಈ ದುರಸ್ತಿ ಕಾಮಗಾರಿ ಆಗಸ್ಟ್ 7ರಿಂದ 13ರವರೆಗೆ ನಡೆಸಲು ನಿರ್ಧರಿಸಲಾಗಿದೆಯಾದರೂ ಗುತ್ತಿಗೆದಾರರು ಮುತುವರ್ಜಿ ವಹಿಸಿ ಬುಧವಾರ ರಾತ್ರಿಯಿಂದಲೇ ಕಾಮಗಾರಿ ಆರಂಭಿಸಿದ್ದಾರೆ. ಈ ಕಾಮಗಾರಿ ಪ್ರತಿ ದಿನ ಬೆಳಗ್ಗೆ 11ರಿಂದ 3 ಗಂಟೆಯವರೆಗೆ ವಾಹನ ದಟ್ಟಣೆ ಇಲ್ಲದ ಸಮಯ ನೋಡಿ ನಡೆಯಲಿದೆ ಮತ್ತು ರಾತ್ರಿ ವೇಳೆ ನಡೆಸಲಾಗುತ್ತದೆ ಎಂದು ಎನ್ ಎಚ್‌ಐಎ ಯೋಜನ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಮಿ ಪ್ರಕಟನೆಯಲ್ಲಿ ತಿಳಿಸಿದ್ದರು.
ಗುತ್ತಿಗೆದಾರ ಸಂಸ್ಥೆಯು ಬುಧವಾರ ರಾತ್ರಿ ಕೂಳೂರಿನಿಂದ ಕಾಮಗಾರಿಯನ್ನು ಆರಂಭಿಸಿದೆ. ಹಳೆಯ ಸೇತುವೆಯ ಮೇಲಿನ ಗುಂಡಿ ಮುಚ್ಚುವ ಕೆಲಸವನ್ನು ರಾತ್ರಿಯೇ ಮುಗಿಸಿದ ಬಳಿಕ ಬೆಳಗ್ಗೆ ಹೊಸ ಸೇತುವೆಯ ದುರಸ್ತಿ ನಡೆಸಿದರು. ಇದೀಗ ಎರಡೂ ಸೇತುವೆಗಳು ಮತ್ತು ಅದನ್ನು ಸಂಪರ್ಕಿಸುವ ರಸ್ತೆ ಹೊಂಡಮುಕ್ತಗೊಂಡಿದೆ. ಮತ್ತು ಸುರತ್ಕಲ್ ಕಡೆಗೆ ಕಾಮಗಾರಿ ಮುಂದುವರಿದಿದೆ.
