ವಿದ್ಯಾರ್ಥಿ ನಾಪತ್ತೆ ಪ್ರಕರಣ: ಗಂಗೊಳ್ಳಿ ನದಿತೀರದಲ್ಲಿ ಮೃತದೇಹ ಪತ್ತೆ

Prakhara News
1 Min Read

ಕುಂದಾಪುರ: ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದ ಹೆಮ್ಮಾಡಿಯ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬನ ಮೃತದೇಹ ಶನಿವಾರ ಬೆಳಿಗ್ಗೆ ಗಂಗೊಳ್ಳಿಯ ದಾಕುಹಿತ್ಲು ನದಿತೀರದಲ್ಲಿ ಪತ್ತೆಯಾಗಿದೆ.

ಮೃತ ವಿದ್ಯಾರ್ಥಿ ಹೆಮ್ಮಾಡಿ ಸಂತೋಷನಗರದ ನಿವಾಸಿ ಲವೇಶ್ ಪೂಜಾರಿಯ ಪುತ್ರ ನಮೇಶ್ (17) ಎಂದು ಗುರುತಿಸಲಾಗಿದೆ.

ಗುರುವಾರ ಸಂಜೆ ಕಾಲೇಜಿನಿಂದ ಹೊರಟಿದ್ದ ನಮೇಶ್, ಮನೆಗೆ ವಾಪಾಸಾಗದೆ ನಾಪತ್ತೆಯಾಗಿದ್ದ. ಬೈಕ್ ಹಾಗೂ ಕಾಲೇಜು ಬ್ಯಾಗ್ ಹೆಮ್ಮಾಡಿ ಸಮೀಪದ ಕನ್ನಡಕುದ್ರು ನದಿತೀರದಲ್ಲಿ ಪತ್ತೆಯಾಗಿದ್ದು, ಇದರಿಂದ ಆತ ನದಿಗೆ ಬಿದ್ದಿರಬಹುದೆಂಬ ಶಂಕೆ ಮೂಡಿತ್ತು.

ಕುಟುಂಬದ ದೂರು ಆಧರಿಸಿ ಕುಂದಾಪುರ ನಗರ ಠಾಣೆ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಈಜುಗಾರರು ಎರಡು ದಿನಗಳ ಕಾಲ ತೀವ್ರ ಹುಡುಕಾಟ ನಡೆಸಿದರು. ಕೊನೆಗೂ ಶನಿವಾರ ಬೆಳಿಗ್ಗೆ ಗಂಗೊಳ್ಳಿಯ ದಾಕುಹಿತ್ಲು ನದಿತೀರದಲ್ಲಿ ಮೃತದೇಹ ಪತ್ತೆಯಾಯಿತು.

ಸಾವಿನ ನಿಖರ ಕಾರಣ ತಿಳಿದುಬರಬೇಕಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Share This Article
Leave a Comment