ರಿಯಾದ್/ದುಬೈ : ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯದಲ್ಲಿರುವ ವಿಶ್ವದ ಪ್ರಮುಖ ಕೈಗಾರಿಕಾ ಕೇಂದ್ರ ‘ಅಲ್ ಜುಬೈಲ್’ ಮೇಲೆ ಇರಾನ್ ಸೋಮವಾರ ಭೀಕರ ಡ್ರೋನ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಿಂದಾಗಿ ಪೆಟ್ರೋಕೆಮಿಕಲ್ ಘಟಕಗಳಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಮುಗಿಲೆತ್ತರಕ್ಕೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದೆ.


ಇರಾನ್ ಏಕಕಾಲದಲ್ಲಿ ಹಲವು ಆತ್ಮಹತ್ಯಾ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಬಳಸಿ ಈ ದಾಳಿ ನಡೆಸಿದೆ. ಸೌದಿಯ ವಾಯು ರಕ್ಷಣಾ ವ್ಯವಸ್ಥೆಯು ಬಹುತೇಕ ಕ್ಷಿಪಣಿಗಳನ್ನು ಹೊಡೆದುರುಳಿಸಿದೆಯಾದರೂ, ಕೆಲವು ಕ್ಷಿಪಣಿಗಳ ಅವಶೇಷಗಳು ನೇರವಾಗಿ ತೈಲ ಸಂಸ್ಕರಣಾ ಮತ್ತು ಪೆಟ್ರೋಕೆಮಿಕಲ್ ಘಟಕಗಳ ಮೇಲೆ ಬಿದ್ದಿವೆ. ಪರಿಣಾಮವಾಗಿ ಇಡೀ ಕೈಗಾರಿಕಾ ವಲಯ ದಟ್ಟ ಕಪ್ಪು ಹೊಗೆಯಿಂದ ಆವೃತವಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಜಾಗತಿಕ ತೈಲ ಮಾರುಕಟ್ಟೆಗೆ ಹೊಡೆತ: ಅಲ್ ಜುಬೈಲ್ ವಿಶ್ವದ ಅತಿದೊಡ್ಡ ಕೈಗಾರಿಕಾ ನಗರಗಳಲ್ಲಿ ಒಂದಾಗಿದ್ದು, ಇಲ್ಲಿನ ಉತ್ಪಾದನೆಯಲ್ಲಿ ವ್ಯತ್ಯಯ ಉಂಟಾದರೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಮೇಲೆ ನೇರ ಪರಿಣಾಮ ಬೀರಲಿದೆ. ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗುವ ಮುನ್ಸೂಚನೆ ಸಿಕ್ಕಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಮತ್ತಷ್ಟು ತೀವ್ರಗೊಂಡಿದೆ. ಸೌದಿ ಸರ್ಕಾರ ಈ ಬಗ್ಗೆ ತುರ್ತು ಸಭೆ ಕರೆದಿದ್ದು, ಭದ್ರತೆಯನ್ನು ಹೆಚ್ಚಿಸಿದೆ. ಅಲ್ ಜುಬೈಲ್ ಕೈಗಾರಿಕಾ ನಗರವು ಕೇವಲ ಸೌದಿ ಅರೇಬಿಯಾದಷ್ಟೇ ಅಲ್ಲ, ವಿಶ್ವದ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ತೈಲ ಶುದ್ಧೀಕರಣ, ಪೆಟ್ರೋಕೆಮಿಕಲ್ ಉತ್ಪಾದನೆ, ರಸಾಯನಿಕ ಘಟಕಗಳು ಮತ್ತು ಭಾರೀ ಕೈಗಾರಿಕೆ ಚಟುವಟಿಕೆಗಳು ಕಾರ್ಯನಿರ್ವಹಿಸುತ್ತಿವೆ.

ಅನೇಕ ಬಹುರಾಷ್ಟ್ರೀಯ ಕಂಪನಿಗಳು ಇಲ್ಲಿ ಹೂಡಿಕೆ ಮಾಡಿರುವುದರಿಂದ, ಈ ಪ್ರದೇಶದಲ್ಲಿ ಉಂಟಾಗುವ ವ್ಯತ್ಯಯವು ಜಾಗತಿಕ ಸರಬರಾಜು ಸರಪಳಿಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಗಳಿವೆ.



