ಮಂಗಳೂರು : ಮಾನವೀಯ ಸೇವೆಗಳ ದಶಕಗಳ ಪರಂಪರೆ ಹೊಂದಿರುವ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ದ.ಕ.ಜಿಲ್ಲಾ ಘಟಕ ಇಂದು ತನ್ನ ಅತ್ಯಪೂರ್ವ ಸೇವಾ ಕಾರ್ಯಗಳ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಕಳೆದ ವರ್ಷ ಸುಮಾರು ೭ ಕೋಟಿ ರೂ.ವೆಚ್ಚದಲ್ಲಿ ೪ ಅಂತಸ್ತುಗಳ ಭವ್ಯ ಶತಮಾನೋತ್ಸವ ಕಟ್ಟಡ ಉದ್ಘಾಟನೆಗೊಂಡಿರುವುದು ಆಡಳಿತ ಮಂಡಳಿಯ ಹೆಮ್ಮೆಯ ಸಾಧನೆಯಾಗಿದೆ ಎಂದು ರೆಡ್‌ಕ್ರಾಸ್ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ತಿಳಿಸಿದ್ದಾರೆ.



ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆ ಆವರಣದಲ್ಲಿರುವ ರೆಡ್‌ಕ್ರಾಸ್‌ನ ಬ್ಲಡ್ ಬ್ಯಾಂಕ್ ವರ್ಷದ ೩೬೫ ದಿನ ಸೇವೆ ನೀಡುತ್ತಿದೆ. ಲೇಡಿಗೋಶನ್ ಆಸ್ಪತ್ರೆಯಲ್ಲಿ ದಾಖಲಾಗುವ ಗರ್ಭಿಣಿಯರು, ಬಾಣಂತಿಯರು ಸಹಿತ ಅವಶ್ಯ ಇರುವ ರೋಗಿಗಳಿಗೆ ಉಚಿತವಾಗಿ ರಕ್ತ ಪೂರೈಸಲಾಗುತ್ತಿದೆ. ಪ್ರತೀ ತಿಂಗಳು ಸುಮಾರು ೫೦೦ ಯುನಿಟ್ ರಕ್ತ ಉಚಿತವಾಗಿ ನೀಡುತ್ತಿರುವುದು ಹಾಗೂ ವೆನ್ಲಾಕ್ ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ಸೇವೆ ಸಾಧನೆಯಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಅವಶ್ಯ ಇದ್ದರೆ ಉಚಿತವಾಗಿ ರಕ್ತ ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರೆಡ್ ಕ್ರಾಸ್ ದ.ಕ.ಜಿಲ್ಲಾ ಘಟಕದ ಆಡಳಿತ ಮಂಡಳಿಗೆ ಫೆ.೨೨ರಂದು ಚುನಾವಣೆ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಸಮರ್ಥ ಅಭ್ಯರ್ಥಿಗಳಾದ
ಡಾ.ಸತೀಶ್ ರಾವ್, ಯತೀಶ್ ಬೈಕಂಪಾಡಿ, ಡಾ. ಬಿ.ಸಚ್ಚಿದಾನಂದ ರೈ, ಸಚೇತ್ ಸುವರ್ಣ, ಡಾ.ಸುಮನ.ಬಿ., ಪುಷ್ಪರಾಜ್ ಜೈನ್, ಗುರುದತ್ ನಾಯಕ್, ವಕೀಲ ರಾಘವೇಂದ್ರ ರಾವ್ ಮತ್ತು ಹಿರಿಯ ಪತ್ರಕರ್ತ
ಪಿ.ಬಿ.ಹರಿಪ್ರಸಾದ್ ರೈ ಇವರುಗಳು ಸಿಎ ಶಾಂತಾರಾಮ ಶೆಟ್ಟಿ ನೇತ್ರತ್ವದ ತಂಡದ ಅಭ್ಯರ್ಥಿಗಳಾಗಿ ಸ್ಪರ್ಧಾ ಕಣದಲ್ಲಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ದೆಹಲಿಯ ರೆಡ್‌ಕ್ರಾಸ್ ನ್ಯಾಶನಲ್ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳಿಂದ ರಾಷ್ಟ್ರೀಯ ಮಂಡಳಿಗೆ ಆಯ್ಕೆಯಾಗುವ ಅವಕಾಶ ನನಗೆ ದೊರೆತಿದೆ. ಇದರಿಂದ ಮುಂದಿನ ದಿನಗಳಲ್ಲಿ ದ.ಕ.ಜಿಲ್ಲಾ ಘಟಕದ ಸೇವಾ ಕಾರ್ಯಗಳಿಗೆ ಇನ್ನಷ್ಟು ನೆರವಾಗಲಿದೆ.
ಪ್ರತೀ ತಿಂಗಳು ಉಚಿತ ರಕ್ತ ತಪಾಸಣೆ ಶಿಬಿರ, ವ್ಹೀಲ್‌ಚೇರ್ ಅವಶ್ಯ ಇರುವವರನ್ನು ಗುರುತಿಸಿ ಅವಶ್ಯ ನೆರವು, ರೆಡ್‌ಕ್ರಾಸ್ ತಾಲೂಕು ಘಟಕಗಳು, ಜೂನಿಯರ್ ರೆಡ್‌ಕ್ರಾಸ್ ಮತ್ತು ಯೂತ್ ರೆಡ್‌ಕ್ರಾಸ್ ಯುನಿಟ್‌ಗಳ ಬಲವರ್ಧನೆ ಸಹಿತ ಹಲವು ಸಮಾಜಮುಖಿ ಕಾರ್ಯಗಳನ್ನು ಭವಿಷ್ಯದಲ್ಲಿ ಹಮ್ಮಿಕೊಳ್ಳಲಾಗಿದೆ. ಇದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ನಮ್ಮ ತಂಡದ ೧೦ ಸಮರ್ಪಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಅವರು ವಿನಂತಿಸಿದ್ದಾರೆ.

