ಸಾಧನೆಗೆ ಅಡ್ಡಿಯಾಗದ ವಯಸ್ಸು: ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಅಮ್ಮ-ಮಗಳು ಏಕಕಾಲಕ್ಕೆ ಉತ್ತೀರ್ಣ!

Prakhara News
1 Min Read

ಬಂಟ್ವಾಳ : ಗುರುವಾರ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶವು ಜಿಲ್ಲೆಯಲ್ಲಿ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಬಂಟ್ವಾಳದ ಬಿ.ಸಿ. ರೋಡ್ ನಿವಾಸಿಗಳಾದ ತಾಯಿ ಮತ್ತು ಮಗಳು ಒಂದೇ ಬಾರಿಗೆ ಪರೀಕ್ಷೆ ಬರೆದು ಉತ್ತೀರ್ಣರಾಗುವ ಮೂಲಕ ಗಮನ ಸೆಳೆದಿದ್ದಾರೆ.

ಬಿ.ಸಿ. ರೋಡ್ ಕೈಕಂಬ ನಿವಾಸಿ, ಗೃಹಿಣಿ ನೇತ್ರಾವತಿ ವಿ.ಆರ್ ಮತ್ತು ಅವರ ಪುತ್ರಿ ಹೇಮಶ್ರೀ ಆರ್. ಅವರೇ ಈ ಅಪರೂಪದ ಸಾಧಕರು. ಮಗಳು ಹೇಮಶ್ರೀ ಬಿ. ಮೂಡ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ 562 ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿಗೆ ‘ಟಾಪರ್’ ಆಗಿ ಹೊರಹೊಮ್ಮಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಮಗಳ ಈ ಸಾಧನೆ ಕುಟುಂಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.


ನಂದಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವಿಕುಮಾರ್ ಅವರ ಪತ್ನಿಯಾಗಿರುವ ನೇತ್ರಾವತಿ ಅವರಿಗೆ ಮೊದಲಿನಿಂದಲೂ ಶಿಕ್ಷಣ ಮುಂದುವರಿಸುವ ಹಂಬಲವಿತ್ತು. ಮಗಳು ಕಾಲೇಜಿಗೆ ಸೇರುತ್ತಿದ್ದಂತೆ ತಾನೂ ಪರೀಕ್ಷೆ ಬರೆಯುವ ಮನಸ್ಸು ಮಾಡಿದ ಅವರಿಗೆ ಪತಿ ಮತ್ತು ಕಾಲೇಜಿನ ಉಪನ್ಯಾಸಕರು ಭರ್ಜರಿ ಬೆಂಬಲ ನೀಡಿದರು. ಮೊಂಟೆಪದವು ಸರ್ಕಾರಿ ಪದವಿಪೂರ್ವ ಕಾಲೇಜಿನ ಮೂಲಕ ಖಾಸಗಿಯಾಗಿ ಪರೀಕ್ಷೆ ಬರೆದ ನೇತ್ರಾವತಿ ಅವರು, ಮೊದಲ ಪ್ರಯತ್ನದಲ್ಲೇ ಕಲಾ ವಿಭಾಗದಲ್ಲಿ 257 ಅಂಕಗಳನ್ನು ಪಡೆಯುವ ಮೂಲಕ ಯಶಸ್ವಿಯಾಗಿದ್ದಾರೆ.

ಒಂದೇ ಮನೆಯಲ್ಲಿ ತಾಯಿ ಮತ್ತು ಮಗಳು ಏಕಕಾಲಕ್ಕೆ ಪಿಯುಸಿ ಪದವಿ ಪಡೆದ ಈ ಅಪರೂಪದ ಕ್ಷಣಕ್ಕೆ ಬಿ.ಸಿ. ರೋಡ್ ಸಾಕ್ಷಿಯಾಯಿತು. “ಪತ್ನಿ ಮತ್ತು ಮಗಳು ಇಬ್ಬರೂ ಸತತ ಪರಿಶ್ರಮ ಹಾಕಿ ಓದುತ್ತಿದ್ದರು. ಅವರ ಇಬ್ಬರ ಸಾಧನೆ ನನಗೆ ತುಂಬು ತೃಪ್ತಿ ನೀಡಿದೆ,” ಎಂದು ರವಿಕುಮಾರ್ ಸಂತಸ ಹಂಚಿಕೊಂಡಿದ್ದಾರೆ.

Share This Article
Leave a Comment